ಬೆಂಗಳೂರು: ರಾಜ್ಯದಲ್ಲಿ ಪಡಿತರ ಹಂಚಿಕೆ ವಿಳಂಬವಾಗಿ ಸುಮಾರು 87 ಲಕ್ಷ ರೇಷನ್ ಕಾರ್ಡುಗಳಿಗೆ ಇನ್ನು ಪಡಿತರ ವಿತರಿಸಬೇಕಿದೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿ ಸದಸ್ಯರಿಗೆ ಉಚಿತವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ತಲಾ ಐದು ಕೆಜಿ ಅಕ್ಕಿ ವಿತರಿಸುತ್ತಿದ್ದು, ಇದರೊಂದಿಗೆ ಅನ್ನಭಾಗ್ಯ ಯೋಜನೆಯಡಿ ಹೊಸ ವ್ಯವಸ್ಥೆಯಡಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ, ಬಯೋಮೆಟ್ರಿಕ್, ಆಧಾರ್ ಓಟಿಪಿ, ಸರ್ವರ್ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದಾಗಿ ಕೆಲವು ಜಿಲ್ಲೆಗಳಲ್ಲಿ ಪಡಿತರ ವಿತರಣೆ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ.
ಬಯೋಮೆಟ್ರಿಕ್ ಬದಲು ಮೊಬೈಲ್ ಓಟಿಪಿ ಮತ್ತು ಚೆಕ್ ಲಿಸ್ಟ್ ಮೂಲಕ ಪಡಿತರ ಹಂಚಿಕೆಗೆ ಅವಕಾಶ ನೀಡಬೇಕೆಂದು ರಾಜ್ಯ ಪಡಿತರ ವಿತರಕರ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಚೆಕ್ ಲಿಸ್ಟ್ ಮೂಲಕ ಪಡಿತರ ವಿತರಿಸಿದರೆ ಪಡಿತರ ದುರ್ಬಳಕೆಯಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಬಯೋಮೆಟ್ರಿಕ್ ನಲ್ಲಿ ಹೆಬ್ಬೆಟ್ಟು ಗುರುತು ಮತ್ತು ಆಧಾರ್ ಓಟಿಪಿ ಮೂಲಕ ಹಂಚಿಕೆ ಮಾಡುವಂತೆ ತಿಳಿಸಲಾಗಿದೆ. ಇದರಿಂದಾಗಿ ಗೊಂದಲ ಮುಂದುವರೆದಿದ್ದು, ರಾಜ್ಯದಲ್ಲಿ ಇದುವರೆಗೆ 60 ಲಕ್ಷ ಕಾರ್ಡುದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ. ಇನ್ನೂ 87 ಲಕ್ಷ ಕಾರ್ಡುಗಳಿಗೆ ಪಡಿತರ ವಿತರಿಸಬೇಕಿದೆ ಎಂದು ಹೇಳಲಾಗಿದೆ.