ನವದೆಹಲಿ: ಪಡಿತರ ಚೀಟಿ ಹೊಂದಿದವರಿಗೆ ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಗಳು ಪಡಿತರ ನಿರಾಕರಿಸುವಂತಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಿರುವ ಪಡಿತರ ಚೀಟಿದಾರರು ಪೋರ್ಟಬಿಲಿಟಿ ಯೋಜನೆಯಡಿ ಯಾವುದೇ ಸ್ಥಳದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ ಇದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ನೀಡಲು ನಿರಾಕರಿಸಿದಲ್ಲಿ ಕೇಂದ್ರ ಸರ್ಕಾರದ ಸಹಾಯವಾಣಿ 14445, ರಾಜ್ಯ ಸರ್ಕಾರದ ಸಹಾಯವಾಣಿ 1967 ಕ್ಕೆ ದೂರು ಸಲ್ಲಿಸಬಹುದಾಗಿದೆ.
ಒನ್ ನೇಷನ್ ಒನ್ ರೇಷನ್ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ವಲಸೆ ಕಾರ್ಮಿಕರು ಪಡಿತರ ಪಡೆದುಕೊಳ್ಳಲು ಅವಕಾಶವಿದೆ. ಮೇರಾ ರೇಷನ್ ಆಪ್ ಮೂಲಕ ಅಥವಾ 14445 ಸಹಾಯವಾಣಿಗೆ ಕರೆ ನೋಂದಾಯಿಸಿಕೊಳ್ಳಬಹುದಾಗಿದೆ.
ತಾವಿರುವ ರಾಜ್ಯದಲ್ಲಿ ವಲಸೆ ಕಾರ್ಮಿಕರು ಪಡಿತರ ಪಡೆಯಲು ನೋಂದಾಯಿಸಿಕೊಳ್ಳಬಹುದಾಗಿದ್ದು, ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದ್ದರೂ ಅಂತವರು ತಾವು ಇರುವ ಸ್ಥಳದಲ್ಲಿ ಪಡಿತರ ಚೀಟಿ, ಆಧಾರ್ ಸಂಖ್ಯೆ ನೀಡಿ ಬಯೋಮೆಟ್ರಿಕ್ ನಲ್ಲಿ ಹೆಬ್ಬೆಟ್ಟಿನ ಗುರುತು ನೀಡಿ ಪಡಿತರ ಪಡೆಯಬಹುದು ಎಂದು ಹೇಳಲಾಗಿದೆ.