ಬೆಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ಅವರು ನವದೆಹಲಿಯಲ್ಲಿ ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ಧಾನ್ವೆ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ ಪ್ರಮಾಣ ಕಡಿತಗೊಳಿಸಿ ಇದಕ್ಕೆ ಬದಲಿಗೆ ರಾಗಿ, ಜೋಳ ಮತ್ತು ಸ್ಥಳೀಯ ಧಾನ್ಯಗಳನ್ನು ವಿತರಿಸಲು ಮನವಿ ಮಾಡಿದ್ದಾರೆ.
ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರ ಪಡಿತರ ನೀಡಬೇಕಿದೆ. ಅಕ್ಕಿ. ಗೋಧಿಯನ್ನು ಮಾತ್ರ ನೀಡುತ್ತಿದ್ದು, ಒಂದೇ ವಿಧದ ಆಹಾರ ಪದ್ಧತಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಸ್ಥಳೀಯ ಧಾನ್ಯಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಈ ಕಾರಣದಿಂದ ಅಕ್ಕಿ, ಗೋಧಿ ಪ್ರಮಾಣ ಕಡಿಮೆ ಮಾಡಿ ಸಬ್ಸಿಡಿ ದರವನ್ನು ರಾಜ್ಯದ ಆಹಾರ ಪದ್ಧತಿಯಲ್ಲಿ ಬಳಸುವ ಜೋಳ, ರಾಗಿ ಮತ್ತು ಸ್ಥಳೀಯ ಆಹಾರ ಧಾನ್ಯಗಳ ಖರೀದಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಚಾಲ್ತಿಯಲ್ಲಿರುವ ನೀತಿ ಬದಲಾವಣೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.