ಬೆಂಗಳೂರು: ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಬದಲಿಗೆ 5 ಕೆಜಿ ಎಲ್ಪಿಜಿ ಗ್ಯಾಸ್ ನೀಡುವಂತೆ ಕರ್ನಾಟಕ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಬೇರೆ ರಾಜ್ಯಗಳಲ್ಲಿ ನೀಡಿದಂತೆ ಪಡಿತರ ಆಹಾರಧಾನ್ಯದ ಜೊತೆಗೆ ಸಾರವರ್ಧಕ ಅಕ್ಕಿ ವಿತರಣೆ ಮತ್ತು ರೇಷನ್ ಕಾರ್ಡ್ ಗೆ 5 ಕೆಜಿ ಎಲ್ಪಿಜಿ ನೀಡುವಂತೆ ಸಂಘದ ರಾಜ್ಯಾಧ್ಯಕ್ಷ ಡಿ.ಜಿ. ಶಿವಾನಂದ ಒತ್ತಾಯಿಸಿದ್ದಾರೆ
ಡೀಸೆಲ್ ಬೆಲೆ ಏರಿಕೆಯಾದ ಕಾರಣ ಆಹಾರಧಾನ್ಯಗಳ ಸಾಗಣಿಕೆ ವೆಚ್ಚ ಹೆಚ್ಚಳವಾಗಿದೆ. ಪಡಿತರ ಸಾಗಾಣಿಕೆಗೆ ಪ್ರತಿ ಕಿಲೋಮೀಟರ್ ಗೆ 6 ರೂಪಾಯಿ ನೀಡಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರ ಕಮಿಷನ್ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜನವರಿ 11 ರಂದು ಬೆಳಗಾವಿಯ ಕೊಂಡುಸ್ಕರ ಭವನದಲ್ಲಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮ್ಮೇಳನ ನಡೆಯಲಿದೆ. ಶ್ರೀ ಕ್ಷೇತ್ರ ಯಡಿಯೂರು ಶ್ರೀಶೈಲಪೀಠದ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.