ಬೆಂಗಳೂರು: ಬೆಂಗಳೂರಿನ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಿಗದೇ ಕಾರ್ಡ್ ದಾರರಿಗೆ ತೊಂದರೆಯಾಗಿದೆ. ಕಳೆದ ಮೂರು ತಿಂಗಳಿನಿಂದ ಬೆಂಗಳೂರಿನ ಹಲವು ಕಡೆಗಳಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ.
ಬೇರೆ ಜಿಲ್ಲೆ ವಲಸಿಗರು ಪಡಿತರ ಪಡೆಯುತ್ತಿರುವ ಕಾರಣ ಆಯಾ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಕಾಯಂ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಸಿಗದಂತಾಗಿದೆ. ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ಎಲ್ಲಿ ಬೇಕಾದರೂ ಪಡಿತರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಕಾರಣ ವಿವಿಧ ಜಿಲ್ಲೆಗಳ ಸಾವಿರಾರು ಕುಟುಂಬದವರು ವಿವಿಧೆಡೆ ವಲಸೆ ಹೋಗಿದ್ದಾರೆ. ಬೆಂಗಳೂರಿನಲ್ಲಿಯೂ ಸಾವಿರಾರು ಕುಟುಂಬಗಳು ನೆಲೆಸಿದ್ದು, ಪ್ರತಿ ತಿಂಗಳು ಬೆಂಗಳೂರಿನ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುತ್ತಿದ್ದಾರೆ.
ಅಂಗಡಿಯೊಂದಕ್ಕೆ ಇಂತಿಷ್ಟು ಕಾರ್ಡುಗಳನ್ನು ನಿಗದಿಪಡಿಸಿ ಅದರಂತೆ ಪ್ರತಿ ತಿಂಗಳು ಪಡಿತರ ಪೂರೈಸಲಾಗುತ್ತದೆ. ಹೆಚ್ಚುವರಿ ಪಡಿತರ ಚೀಟಿದಾರರು ಬಂದರೆ ಪಡಿತರ ಸಮರ್ಪಕ ವಿತರಣೆ ಸಾಧ್ಯವಾಗುತ್ತಿಲ್ಲ. ಪಡಿತರ ಕೋರಿ ಬಂದ ಕಾರ್ಡ್ ದಾರರನ್ನು ವಾಪಸ್ ಕಳುಹಿಸಬಾರದೆಂದು ಆಹಾರ ಇಲಾಖೆ ಸೂಚನೆ ನೀಡಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಮಾದರಿಯಲ್ಲಿ ಪಡಿತರ ವಿತರಿಸಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸಮಸ್ಯೆ ಹೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಅಡಿ ಪಡಿತರ ನೀಡಲಾಗುತ್ತಿದೆ ಎಂದು ನ್ಯಾಯಬೆಲೆ ಅಂಗಡಿಯವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಪಡಿತರ ಸಿಗದವರ ಒತ್ತಾಯವಾಗಿದೆ.