ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಪಡಿತರ ಪಡೆದುಕೊಳ್ಳಲಾಗದ ಅಸಹಾಯಕರಿಗೆ ಅನ್ನ ಸುವಿಧಾ ಆ್ಯಪ್ ಮೂಲಕ ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುತ್ತಿದೆ. ವೃದ್ಧರಿಗೆ, ಒಬ್ಬಂಟಿಯಾಗಿರುವ ಅಸಹಾಯಕರಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ಮನೆಯ ಬಾಗಿಲಿಗೆ ಪಡಿತರ ತಲುಪಿಸಲು ರಾಜ್ಯ ಸರ್ಕಾರ ಹೊಸ ಸೌಲಭ್ಯ ಕಲ್ಪಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಾಯೋಗಿಕವಾಗಿ ಅಸಹಾಯಕರ ಮನೆ ಬಾಗಿಲಿಗೆ ರೇಷನ್ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ನ್ಯಾಯಬೆಲೆ ಅಂಗಡಿಯವರು ಅನ್ನ ಸುವಿಧಾ ಅಪ್ಲಿಕೇಶನ್ ನಲ್ಲಿರುವ ತಮ್ಮ ವ್ಯಾಪ್ತಿಯ ಅಸಹಾಯಕರ ಹೆಸರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಬೇಕು. ಅವರ ಮನೆ ಮುಂದೆ ನಿಂತು ಜಿಪಿಎಸ್ ವ್ಯವಸ್ಥೆಯೊಂದಿಗೆ ಅನ್ನ ಸುವಿಧಾ ಆ್ಯಪ್ ನಲ್ಲಿ ಪಡಿತರದ ಮಾಹಿತಿ ಅಪ್ಲೋಡ್ ಮಾಡಬೇಕು.
ನ್ಯಾಯಬೆಲೆ ಅಂಗಡಿಯವರು ಆ್ಯಪ್ ನಲ್ಲಿ ನೀಡಿದ ಮಾಹಿತಿ ಆಧರಿಸಿ ಆಹಾರ ಇಲಾಖೆ ನಿರೀಕ್ಷಕರು ಫಲಾನುಭವಿಗಳ ಮನೆಗೆ ತೆರಳಿ ಪಡಿತರ ನೀಡಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಜಿಪಿಎಸ್ ಮಾಹಿತಿ ಸಹಿತ ಪಡಿತರ ತಲುಪಿದ ಬಗ್ಗೆ ಖಾತರಿಪಡಿಸುವುದು ಕಡ್ಡಾಯವಾಗಿದೆ. ರಾಜ್ಯದಲ್ಲಿ ಈ ರೀತಿ ಅಸಾಯಕರು, ವೃದ್ಧರು, ಒಬ್ಬಂಟಿಯಾಗಿರುವ ವೃದ್ಧರು ಸೇರಿ ವ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಲಾಗದವರ ಗುರುತಿಸಿ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.