ಬೆಂಗಳೂರು: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೆ ಮೂರು ದಿನಗಳ ಕಾಲ ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ ನೀಡಿದೆ. ಆದರೆ, ಈ ಬಾರಿಯೂ ಸರ್ವರ್ ತೊಂದರೆಯಿಂದ ಜನ ಪರದಾಡುವಂತಾಗಿದೆ.
ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಮೂರು ದಿನ ಅವಕಾಶ ನೀಡಿರುವುದಾಗಿ ಮೊದಲೇ ತಿಳಿಸಿದ್ದರಿಂದ ಫಲಾನುಭವಿಗಳು ಕೆಲಸ ಕಾರ್ಯ ಬಿಟ್ಟು ಗ್ರಾಮ ಒನ್ ಕೇಂದ್ರಗಳ ಮುಂದೆ ಕಾಯುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಸಾಧ್ಯವಾಗುತ್ತಿಲ್ಲ.
ರಾಜ್ಯದಲ್ಲಿ ಪಡಿತರ ಕಾರ್ಡ್ ನಲ್ಲಿರುವ ದೋಷದಿಂದ ಲಕ್ಷಾಂತರ ಫಲಾನುಭವಿಗಳಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗುತ್ತಿಲ್ಲ. ಹೀಗಾಗಿ ಪಡಿತರ ಚೀಟಿಗಳಲ್ಲಿ ತಿದ್ದುಪಡಿ ಮಾಡಿಕೊಂಡು ಹಣ ಪಡೆಯಲು ಮುಂದಾದವರಿಗೆ ಸರ್ವರ್ ಪ್ರಾಬ್ಲಮ್ ಅಡ್ಡಿಯಾಗಿದೆ.
ಒಂದೂವರೆ ತಿಂಗಳ ಹಿಂದೆ ಮೊದಲ ಬಾರಿಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ಜಿಲ್ಲೆಗಳಿಗೆ ತಲಾ ಮೂರು ದಿನಗಳಂತೆ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆಯ ಕಾರಣ ತಿದ್ದುಪಡಿ ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಎರಡನೇ ಬಾರಿಗೆ ಅವಕಾಶ ನೀಡಲಾಗಿದೆ. ಆದರೂ ಸರ್ವರ್ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ತಿದ್ದುಪಡಿ ವಿಳಂಬವಾಗುತ್ತಿದ್ದು, ಜನ ಕೆಲಸ ಕಾರ್ಯ ಬಿಟ್ಟು ಗ್ರಾಮ ಒನ್ ಕೇಂದ್ರಗಳ ಎದುರು ಕಾಯುವ ಪರಿಸ್ಥಿತಿ ಎದುರಾಗಿದೆ. ಸರ್ವರ್ ಸಮಸ್ಯೆಯನ್ನು ಸರಿ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಜನ ದಿನಗಟ್ಟಲೆ ಕಾಯುವ ಪರಿಸ್ಥಿತಿ ಇದೆ ಎಂದು ದೂರಿದ್ದಾರೆ.