ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುವ ಅಕ್ಕಿಯನ್ನು ಮಾರಾಟ ಮಾಡಿದರೆ ಆರು ತಿಂಗಳು ಪಡಿತರ ಚೀಟಿಯನ್ನು ಅಮಾನತು ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.
ಅನ್ನಭಾಗ್ಯ ಯೋಜನೆಯಡಿ ಪಡೆಯುವ ಪಡಿತರವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಫಲಾನುಭವಿಗಳ ರೇಷನ್ ಕಾರ್ಡ್ ಅಮಾನತು ಮಾಡಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುವ ಅಕ್ಕಿಯನ್ನು ಮಾರಾಟ ಮಾಡುತ್ತಿರುವ ಪ್ರಕರಣ ಹೆಚ್ಚಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಕ್ರಮವಾಗಿ ಆಹಾರಧಾನ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ. ಅಂತಹ ಪಲಾನುಭವಿಯ ಪಡಿತರ ಚೀಟಿಯನ್ನು ಆರು ತಿಂಗಳು ಅಮಾನತು ಮಾಡಲಾಗುವುದು. ಮಾರುಕಟ್ಟೆ ದರದಲ್ಲಿ ಅಕ್ಕಿಯನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರವು ಪ್ರತಿ ಕೆಜಿ 30 ರೂಪಾಯಿಯಂತೆ ಅಕ್ಕಿ ಖರೀದಿಸಿ ರಾಜ್ಯಕ್ಕೆ 3 ರೂಪಾಯಿಗೆ ನೀಡುತ್ತದೆ. ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 2 ಕೆಜಿ ಗೋಧಿ, ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಲಾಗಿದೆ.