ಬೆಳಗಾವಿ: ರಾಜ್ಯದ ಎಲ್ಲಾ ಹಾಡಿಗಳು, ತಾಂಡಾಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ-ಪಂಗಡದ ಕಾಲೋನಿಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಸುವರ್ಣಸೌಧದ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ ರಾಥೋಡ್ ಅವರ ಸೂಚನೆಗೆ ಉತ್ತರಿಸಿದ ಸಚಿವರು, ಎಲ್ಲಾ ಹಾಡಿಗಳು, ತಾಂಡಾಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ-ಪಂಗಡದ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶಕ್ಕೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
100 ರೇಷನ್ ಕಾರ್ಡ್ ಗಳಿಗೆ ಸೀಮಿತಗೊಳಿಸಿ ತಾಂಡಾದಲ್ಲಿ 376 ನ್ಯಾಯಬೆಲೆ ಅಂಗಡಿ ಮಂಜೂರಾತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ನ್ಯಾಯಬೆಲೆ ಅಂಗಡಿ ಸ್ಥಾಪನೆಗೆ ಮನವಿ ಮಾಡಿದರೆ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದರಿಂದಾಗಿ ಪಡಿತರ ಚೀಟಿದಾರರಿಗೆ ಸಮೀಪದಲ್ಲೇ ರೇಷನ್ ಪಡೆಯಲು ಅನುಕೂಲವಾಗಲಿದೆ ಎನ್ನಲಾಗಿದೆ.