ಬೆಂಗಳೂರು: ಮೃತಪಟ್ಟರವರ ಹೆಸರಿನಲ್ಲಿ ಪಡಿತರ ಮತ್ತು ಡಿಬಿಟಿ ಮೂಲಕ ಹಣ ಪಡೆಯುತ್ತಿದ್ದ 5.18 ಲಕ್ಷಕ್ಕೂ ಹೆಚ್ಚು ಅನರ್ಹರನ್ನು ಪತ್ತೆ ಮಾಡಿದ ಆಹಾರ ಇಲಾಖೆ ಅಂತಹವರ ಹೆಸರು ಡಿಲೀಟ್ ಮಾಡಿ ಬೊಕ್ಕಸಕ್ಕೆ ಆಗುತ್ತಿದ್ದ ಕೋಟ್ಯಂತರ ರೂಪಾಯಿ ನಷ್ಟವನ್ನು ತಡೆದಿದೆ.
ಮೃತಪಟ್ಟವರ ಹೆಸರಿನಲ್ಲೂ ಪಡಿತರ ವಿತರಿಸುತ್ತಿರುವ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಜುಲೈನಿಂದ ಆಗಸ್ಟ್ ವರೆಗೆ ಪರಿಶೀಲನೆ ನಡೆಸಿ ಲಕ್ಷಾಂತರ ಮೃತರ ಹೆಸರುಗಳನ್ನು ಡಿಲೀಟ್ ಮಾಡಿದೆ.
ಮೃತಪಟ್ಟವರ ಹೆಸರನ್ನು ಡಿಲೀಟ್ ಮಾಡಿಸುವಂತೆ ಸರ್ಕಾರ ಅರಿವು ಮೂಡಿಸಿದ್ದರೂ ಅನೇಕರು ಮೃತಪಟ್ಟವರ ಹೆಸರಿನಲ್ಲಿ ಪಡಿತರ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಜನನ -ಮರಣ ನೋಂದಣಿ ಇಲಾಖೆಯ ಇ- ಜನ್ಮ ವಿಭಾಗದಿಂದ ಮೃತರ ವಿವರ ಸಂಗ್ರಹಿಸಿ ಆಧಾರ್ ಮಾಹಿತಿ ಆಧರಿಸಿ ಮೃತರ ಹೆಸರುಗಳನ್ನು ಪತ್ತೆ ಹಚ್ಚಿ ಫಲಾನುಭವಿಗಳ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.
ಮೃತಪಟ್ಟವರ ಹೆಸರಿನಲ್ಲಿ 5 ಕೆಜಿ ಅಕ್ಕಿ ಮತ್ತು ಕಳೆದ ಎರಡು ತಿಂಗಳಿನಿಂದ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನೀಡುತ್ತಿದ್ದ ಹಣವನ್ನು ಸ್ಥಗಿತ ಮಾಡಲಾಗಿದೆ. ಇದರಿಂದ ಸುಮಾರು 8 ಕೋಟಿ ರೂ ನಷ್ಟ ತಪ್ಪಿದೆ. 1.03 ಕೋಟಿ ಅನ್ನ ಭಾಗ್ಯ ಕಾರ್ಡ್ ಇದ್ದು, 3.69 ಕೋಟಿ ಫಲಾನುಭವಿಗಳಿದ್ದಾರೆ. 97.61 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳಿಗೆ ಡಿಬಿಟಿ ಮೂಲಕ 565 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
4.42 ಕೋಟಿ ಫಲಾನುಭವಿಗಳ ಪೈಕಿ 5.18 ಲಕ್ಷಕ್ಕೂ ಹೆಚ್ಚು ಮಂದಿ ಹೆಸರು ಡಿಲೀಟ್ ಮಾಡಲಾಗಿದೆ. ಬೆಳಗಾವಿಯಲ್ಲಿ 37 ಸಾವಿರ, ತುಮಕೂರಿನಲ್ಲಿ 30 ಸಾವಿರ, ಮೈಸೂರಿನಲ್ಲಿ 26,000 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗಿದೆ.