ರಾಜ್ಯಾದ್ಯಂತ ಹೊಸ ಪಡಿತರ ಚೀಟಿ ವಿತರಣೆ, ಹೆಸರು ಬದಲಾವಣೆ, ಸೇರ್ಪಡೆ ಮೊದಲಾದ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ.
ಸರ್ಕಾರದ ಅನ್ನಭಾಗ್ಯ, ಗೃಹಲಕ್ಷ್ಮಿ ಮೊದಲಾದ ಯೋಜನೆಗಳಿಂದ ಸಾವಿರಾರು ಫಲಾನುಭವಿಗಳು ವಂಚಿತರಾಗುವ ಆತಂಕ ಎದುರಾಗಿದೆ. ಪಡಿತರ ಚೀಟಿಗೆ ಹೆಸರು ಸೇರಿಸಲು ಸಾಧ್ಯವಾಗದೆ ಫಲಾನುಭವಿಗಳು ಪರದಾಟ ನಡೆಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಮೊದಲೇ ಪಡಿತರ ಚೀಟಿಗೆ ಸಂಬಂಧಿಸಿದ ವೆಬ್ಸೈಟ್ ಲಿಂಕ್ ಬಂದ್ ಮಾಡಲಾಗಿದೆ. ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆಯುತ್ತಾ ಬಂದರು ವೆಬ್ಸೈಟ್ ಗೆ ಮರು ಚಾಲನೆ ನೀಡಿಲ್ಲ. ಶೀಘ್ರದಲ್ಲೇ ಮತ್ತೆ ತಿದ್ದುಪಡಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಹಿಳೆಯರಿಗೆ ಮಾಸಿಕ 2,000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಯ ಕುಟುಂಬದ ಯಜಮಾನಿಯನ್ನು ಪಡಿತರ ಚೀಟಿ ಮೂಲಕ ಗುರುತಿಸಲಾಗುತ್ತದೆ. ಆದರೆ, ಅನೇಕ ಪಡಿತರ ಚೀಟಿಗಳು ಮೃತಪಟ್ಟವರ ಹೆಸರಿನಲ್ಲಿದ್ದು, ಬದಲಾವಣೆಯಾಗಬೇಕಿದೆ. ಮದುವೆಯಾಗಿ ಬಂದ ಹೆಣ್ಣು ಮಕ್ಕಳ ಹೆಸರನ್ನು ಪತಿ ಕುಟುಂಬದ ರೇಷನ್ ಕಾರ್ಡ್ ನಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ. ಹೆಸರು, ವಿಳಾಸ ಬದಲಾವಣೆಗೂ ಅವಕಾಶ ಇಲ್ಲ. ಹೀಗಾಗಿ ಸಾವಿರಾರು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಅನ್ನಭಾಗ್ಯ ಯೋಜನೆಯ ಸೌಲಭ್ಯವೂ ಸಿಗದಂತಾಗಿದೆ ಎಂದು ಹೇಳಲಾಗಿದೆ.