ಬೆಳಗಾವಿ: ಪಡಿತರ ಚೀಟಿದಾರರಿಗೆ ರಾಗಿ, ಕಡಲೆ, ಹೆಸರು ಬೇಳೆ, ಜೋಳ ಸೇರಿದಂತೆ ಸ್ಥಳೀಯ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿ ಜೊತೆಗೆ ಹೆಸರು ಬೇಳೆ, ತೊಗರಿ, ಜೋಳ, ರಾಗಿ ವಿತರಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಧಾನ್ಯ ವಿತರಿಸುವ ಯೋಜಿಸಲಾಗಿದ್ದು, ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ಜೋಳ, ತೊಗರಿ, ಹೆಸರುಬೇಳೆ ನೀಡಲಾಗುವುದು. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಅಕ್ಕಿ ಜೊತೆಗೆ ರಾಗಿ, ತೊಗರಿ, ಹೆಸರು ಬೇಳೆ ವಿತರಿಸಲಾಗುವುದು. ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಆಹಾರ ಭದ್ರತೆ ಯೋಜನೆಯಡಿ ನೀಡುತ್ತಿರುವ ಅಕ್ಕಿಯನ್ನು ರಾಜ್ಯದಲ್ಲಿಯೇ ಖರೀದಿಸಬೇಕೆಂಬ ಉದ್ದೇಶ ಹೊಂದಿದ್ದು, ಇದರಿಂದ ರಾಜ್ಯದ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶೀಘ್ರವೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ದೆಹಲಿಗೆ ತೆರಳಿ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸುವುದಾಗಿ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.