ಬೆಂಗಳೂರು: ಸುಗಮವಾಗಿ ಪಡಿತರ ವಿತರಿಸಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿದ ತಂತ್ರಾಂಶದಿಂದಾಗಿ ಪಡಿತರ ಚೀಟಿದಾರರಿಗೆ ಸಂಕಷ್ಟ ಎದುರಾಗಿದೆ.
ಹೊಸ ತಂತ್ರಾಂಶ ಅಳವಡಿಕೆ, ಸರ್ವರ್ ಸಮಸ್ಯೆಯಿಂದಾಗಿ ದಿನವಿಡೀ ಕಾದರೂ ಪಡಿತರ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಸುಮಾರು 200 -300 ಮಂದಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತರೂ 50 ಮಂದಿಗಷ್ಟೇ ರೇಷನ್ ಸಿಗುತ್ತಿದೆ. ರಾಜ್ಯಾದ್ಯಂತ ಪಡಿತರ ಚೀಟಿದಾರರು ರೇಷನ್ ಪಡೆಯಲು ಪರದಾಟ ನಡೆಸುವಂತಾಗಿದೆ.
ಆಹಾರ ಇಲಾಖೆಯ ಸಾಫ್ಟ್ವೇರ್ ಅನ್ನು 30 ಇಲಾಖೆಗಳು ಬಳಸುತ್ತಿರುವುದರಿಂದ ಸರ್ವರ್ ಡೌನ್ ಸಮಸ್ಯೆ ಹೆಚ್ಚಾಗಿತ್ತು. ಇದಕ್ಕಾಗಿ ಆಹಾರ ಇಲಾಖೆ ಹೊಸ ಸಾಫ್ಟ್ ವೇರ್ ಅಳವಡಿಸಲು ಸೆಪ್ಟೆಂಬರ್ ಅಂತ್ಯದಲ್ಲಿ ಕಾರ್ ಆರಂಭವಾಗಿದ್ದರೂ ಅಕ್ಟೋಬರ್ ಬಂದರೂ ಪೂರ್ಣವಾಗಿಲ್ಲ. ಇದರ ನಡುವೆ ಮೊದಲೇ ಇದ್ದ ಸರ್ವರ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಪಡಿತರ ಚೀಟಿದಾರರಿಗೆ ತೊಂದರೆ ಆಗಿದೆ. ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರ ಪಡೆಯಲು ನೂರಾರು ಮಂದಿ ಕೆಲಸ ಕಾರ್ಯ ಬಿಟ್ಟು ನಿತ್ಯವೂ ಕ್ಯೂ ನಿಲ್ಲುವಂತಹ ಪರಿಸ್ಥಿತಿ ಇದೆ. ಪ್ರತಿ ತಿಂಗಳು 10, 12ನೇ ತಾರೀಖಿನೊಳಗೆ ಆಹಾರ ಧಾನ್ಯ ಹಂಚಿಕೆ ಪೂರ್ಣವಾಗುತ್ತಿತ್ತು. ಈಗ ಅಕ್ಟೋಬರ್ 17ರಿಂದ ಆಹಾರಧಾನ್ಯ ವಿತರಣೆ ವಿಳಂಬವಾಗಿ ಸಾಗಿದೆ. ಪಡಿತರ ಚೀಟಿದಾರರಿಗೆ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.