ಬೆಂಗಳೂರು: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸುವಾಗ ರಸೀದಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಪಡಿತರ ವಿತರಣೆಯನ್ನು ಮತ್ತಷ್ಟು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಕೇಂದ್ರ ಸರ್ಕಾರದ ಸೂಚನೆ ಅನ್ವಯ ಆಹಾರ ಇಲಾಖೆ ಆಯುಕ್ತರು ಆದೇಶ ನೀಡಿದ್ದು, ರಾಜ್ಯದ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಗ್ರಾಹಕರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಸೂಚನೆ ನೀಡಿದ್ದಾರೆ.
ಪಡಿತರ ಪಡೆಯುವ ಫಲಾನುಭವಿಗಳಿಗೆ ರಸೀದಿ ನೀಡಲು ಅನುಕೂಲವಾಗುವಂತೆ ಆಹಾರ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ರಸೀದಿ ನೀಡಲು ಅಗತ್ಯವಿರುವ ಸೌಲಭ್ಯ ಅಳವಡಿಸಿಕೊಳ್ಳಲು ತಿಳಿಸಲಾಗಿದೆ.
ರಸೀದಿ ವಿತರಣೆ ಸೇರಿ ಖರ್ಚು ಭರಿಸಲು ಕಮಿಷನ್ ಹೆಚ್ಚಳ ಮಾಡುವಂತೆ ಪಡಿತರ ವಿತರಕರ ಮನವಿಯನ್ನು ಸರ್ಕಾರ ಪರಿಗಣಿಸಿದ್ದು, ಒಂದು ಕ್ವಿಂಟಲ್ ಪಡಿತರಕ್ಕೆ ನೀಡುತ್ತಿದ್ದ 100 ರೂ. ಕಮಿಷನ್ ಮೊತ್ತವನ್ನು 125 ರೂ.ಗೆ ಹೆಚ್ಚಳ ಮಾಡಲಾಗಿದೆ. ಯಾವುದೇ ಕಾರಣ ಹೇಳದೆ ರಸೀದಿ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.