ಬಳ್ಳಾರಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2021ನೇ ಜುಲೈ ಮಾಹೆಯ ಪಡಿತರ ಈಗಾಗಲೇ ಹಂಚಿಕೆಯಾಗಿದ್ದು, ಅದರಂತೆ ಪಡಿತರ ಚೀಟಿದಾರರು ಪಡಿತರ ಪಡೆದುಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅಂತರರಾಜ್ಯ ಅಥವಾ ಅಂತರ್ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರವು ಅನ್ನಭಾಗ್ಯ ಹಾಗೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಡವರಿಗೆ ನೀಡಿದ ಪಡಿತರವನ್ನು ಹೆಚ್ಚಿನ ದರಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಫಲಾನುಭವಿಗಳಿಗೆ ವಿತರಿಸುವ ಪಡಿತರ ಪ್ರಮಾಣದ ವಿವರ:
ಅಂತ್ಯೋದಯ(ಎಎವೈ)ಪಡಿತರ ಚೀಟಿಗೆ (ಎನ್‍ಎಫ್‍ಎಸ್‍ಎ) ಪ್ರತಿ ಕಾರ್ಡಿಗೆ 15ಕೆ.ಜಿ ಅಕ್ಕಿ, ಪ್ರತಿ ಕಾರ್ಡಿಗೆ 20 ಕೆ.ಜಿ. ಜೋಳ/ ರಾಗಿ, (ಪಿಎಂಜಿಕೆಎವೈ) ಪ್ರತಿ ಸದಸ್ಯರಿಗೆ 05ಕೆಜಿ ಅಕ್ಕಿ, ಆದ್ಯತಾ (ಪಿಎಚ್‍ಎಚ್/ಬಿಪಿಎಲ್) ಪಡಿತರ ಚೀಟಿಗೆ (ಎನ್‍ಎಫ್‍ಎಸ್‍ಎ) ಪ್ರತಿ ಸದಸ್ಯರಿಗೆ 2ಕೆಜಿ ಅಕ್ಕಿ, 3ಕೆಜಿ ರಾಗಿ/ಜೋಳ, (ಪಿಎಂಜಿಕೆಎವೈ) ಪ್ರತಿ ಸದಸ್ಯರಿಗೆ 5ಕೆಜಿ ಅಕ್ಕಿ ಉಚಿತವಾಗಿ ಪಡೆಯಬಹುದು. ಎ.ಪಿ.ಎಲ್ (Willingness) ಪಡಿತರ ಚೀಟಿಗೆ ಪ್ರತಿ ಕೆ.ಜಿಗೆ ರೂ.15ರಂತೆ ಏಕ ಸದಸ್ಯ 05 ಕೆ.ಜಿ ಅಕ್ಕಿ,ಎರಡಕ್ಕಿಂತ ಹೆಚ್ಚಿನ ಸದಸ್ಯರಿಗೆ 10ಕೆ.ಜಿ ಅಕ್ಕಿ ನೀಡಲಾಗುತ್ತದೆ.
ಯಾವುದೇ ದೂರುಗಳಿದ್ದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಅವರ ಮೊ.ಸಂ:9019294225 ಅಥವಾ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಅವರ ಮೊ: ಮೊ.ಸಂ:9449670777ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.