ದೇಶದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸ ಅರಸಿ ಬರುವ ಕೋಟ್ಯಾಂತರ ಕಾರ್ಮಿಕರು ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಕಾರ್ಮಿಕರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡ ಕೇಂದ್ರ ಸರ್ಕಾರ ʼಒನ್ ನೇಷನ್ ಒನ್ ರೇಷನ್ʼ ಕಾರ್ಡ್ ವ್ಯವಸ್ಥೆ ಜಾರಿಗೆ ತಂದಿದೆ. ಇದ್ರಿಂದ ಕಾರ್ಮಿಕರಿಗೆ ಅನುಕೂಲವಾಗ್ತಿದೆ
ಪ್ರತಿಯೊಬ್ಬರಿಗೂ ಆಹಾರ ಸಿಗಬೇಕು ಎನ್ನುವ ಉದ್ದೇಶದಿಂದ ʼಒನ್ ನೇಷನ್ ಒನ್ ರೇಷನ್ ಕಾರ್ಡ್ʼ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸುವುದರ ಜೊತೆಗೆ ರಾಜ್ಯಗಳಿಗೆ ನಕಲಿ, ಅನರ್ಹ ಕಾರ್ಡ್ ಗುರುತು ಕೂಡ ಸುಲಭವಾಗಿದೆ. ಫಲಾನುಭವಿಗಳ ಆಧಾರ್ ಕಾರ್ಡನ್ನು ಪಡಿತರ ಚೀಟಿಗೆ ಲಿಂಕ್ ಮಾಡಲಾಗುತ್ತದೆ. ನಂತ್ರ ಬಯೋಮೆಟ್ರಿಕ್ ಮೂಲಕ ಪಡಿತರ ನೀಡಲಾಗುತ್ತದೆ.
ಮೋದಿ ಸರ್ಕಾರದ ಈ ಯೋಜನೆಯನ್ನು ಈಗ 32 ರಾಜ್ಯಗಳಿಗೆ ವಿಸ್ತರಿಸಲಾಗಿದೆ. ನಾಲ್ಕು ರಾಜ್ಯಗಳು ತಮ್ಮ ನೆಟ್ವರ್ಕ್ ಡಿಜಿಟಲ್ ಮಾಡುವ ಪ್ರಕ್ರಿಯೆಯಲ್ಲಿದೆ. ಇತರ ರಾಜ್ಯಗಳ ಪಡಿತರ ಚೀಟಿ ಹೊಂದಿರುವವರ ಅನುಕೂಲಕ್ಕಾಗಿ ಕೇಂದ್ರ ʼಮೇರಾ ರೇಷನ್ʼ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಪಡಿತರ ಚೀಟಿ ಹೊಂದಿರುವವರಿಗೆ ನೆರವಾಗಲಿದೆ. ಅದ್ರಲ್ಲೂ ವಿಶೇಷವಾಗಿ ಇತರ ರಾಜ್ಯಗಳ ಪಡಿತರ ಚೀಟಿ ಹೊಂದಿರುವವರಿಗೆ ಹತ್ತಿರದ ಪಡಿತರ ಅಂಗಡಿ ಗುರುತಿಸಲು, ಅರ್ಹತೆ ಪರಿಶೀಲಿಸಲು ಮತ್ತು ಇತ್ತೀಚಿನ ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ.