ಬೆಂಗಳೂರು: ಪಡಿತರ ಚೀಟಿ ತಿದ್ದುಪಡಿಗೆ ಜನವರಿ 31 ಕೊನೆಯ ದಿನ ಎನ್ನುವ ವದಂತಿ ಹಿನ್ನೆಲೆಯಲ್ಲಿ ಬೆಂಗಳೂರು ಒನ್ ಕೇಂದ್ರಕ್ಕೆ ಪಡಿತರ ಚೀಟಿದಾರರು ಮುಗಿಬೀಳುತ್ತಿದ್ದು, ಕಿಲೋಮೀಟರ್ ವರೆಗೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ತಿದ್ದುಪಡಿ ಪ್ರಕ್ರಿಯೆಗಾಗಿ ಜನ ಕಾಯುತ್ತಿದ್ದು, ಸರ್ವರ್ ಡೌನ್ ಸಮಸ್ಯೆಯಿಂದ ತೊಂದರೆ ಎದುರಾಗಿದೆ.
ಬಿಪಿಎಲ್, ಎಪಿಎಲ್ ಕಾರ್ಡ್ ನಲ್ಲಿರುವ ಸದಸ್ಯರ ಹೆಸರು ತೆಗೆದುಹಾಕಲು, ಹೊಸ ಹೆಸರು ಸೇರ್ಪಡೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಾರ್ಡ್ ವಿಳಾಸ ಬದಲಾವಣೆ, ಇ-ಕೆವೈಸಿ ಪ್ರಕ್ರಿಯೆ, ಅಕ್ಕಿ ಪಡೆಯುವ ನ್ಯಾಯ ಬೆಲೆ ಅಂಗಡಿಗಳ ವಿಳಾಸ ಬದಲಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಜನವರಿ 31 ಕೊನೆಯ ದಿನ ಎನ್ನುವ ವದಂತಿ ಹಿನ್ನೆಲೆಯಲ್ಲಿ ಜನ ಬೆಂಗಳೂರು ಒನ್ ಕೇಂದ್ರಕ್ಕೆ ಮುಗಿಬೀಳುತ್ತಿದ್ದು, ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ. ರಾಜಾಜಿನಗರ ಬೆಂಗಳೂರು ಒನ್ ಕೇಂದ್ರದ ಬಳಿ ಜನ ಸರತಿ ಸಾಲಿನಲ್ಲಿ ನಿಂತು ಕಾಯತೊಡಗಿದ್ದು, ಸರ್ವರ್ ಡೌನ್ ನಿಂದಾಗಿದ ಕಾರಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
2024ರ ಡಿಸೆಂಬರ್ ವರೆಗೆ ಆಹಾರ ಇಲಾಖೆ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು. ದಿನಾಂಕ ವಿಸ್ತರಿಸುವಂತೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಜನವರಿ 31ರವರೆಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಪಡಿತರ ಕಾರ್ಡ್ ದಾರರು ತಿದ್ದುಪಡಿ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಆದರೆ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಪಡಿತರ ಚೀಟಿಗಳ ತಿದ್ದುಪಡಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಕಾರ್ಡ್ ದಾರರು ಆತಂಕ ಪಡಬಾರದು. ಪ್ರತಿ ತಿಂಗಳು 1ರಿಂದ 10ನೇ ತಾರೀಖಿನವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ತಿಂಗಳ ಕೊನೆಯ ವಾರದಲ್ಲಿಯೂ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.