ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದುಕೊಂಡಿದ್ದ 3,55,516 ರೇಷನ್ ಕಾರ್ಡ್ ಗಳನ್ನು ಅನರ್ಹಗೊಳಿಸಲಾಗಿದೆ.
ಆರ್ಥಿಕವಾಗಿ ಸಬಲರಾದವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಆದಾಯ ತೆರಿಗೆ ಪಾವತಿದಾರ ಕುಟುಂಬಗಳು, ಸರ್ಕಾರಿ ನೌಕರರು, 3 ಹೆಕ್ಟೇರ್ ಗಿಂತ ಹೆಚ್ಚು ಜಮೀನು ಹೊಂದಿರುವ ಕುಟುಂಬದವರು ಹಾಗೂ 1.20 ಲಕ್ಷ ರೂ. ಗಿಂತ ಹೆಚ್ಚು ಆದಾಯ ಹೊಂದಿದ ಕುಟುಂಬದವರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
3,28,178 ಬಿಪಿಎಲ್ ಕಾರ್ಡ್ ಮತ್ತು 25,527 ಅಂತ್ಯೋದಯ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ರದ್ದಾದ ಅನೇಕ ಅಂತ್ಯೋದಯ ಕಾರ್ಡ್ ದಾರರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಕಾರ್ಡ್ ಬದಲಾವಣೆ ಮಾಡಿಕೊಡಲಾಗಿದೆ.
ಮಾನದಂಡ ಉಲ್ಲಂಘಿಸಿ ಪಡೆದುಕೊಂಡ ಅನರ್ಹರ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಟಿವಿ, ಫ್ರಿಡ್ಜ್, ಬೈಕ್ ಇರುವ ಕುಟುಂಬದವರ ಕಾರ್ಡನ್ನು ರದ್ದು ಮಾಡಲಾಗುತ್ತಿಲ್ಲ. ಸರ್ಕಾರ ನಿಗದಿ ಮಾಡಿದ ಮಾನದಂಡಗಳಲ್ಲಿ ಟಿವಿ, ಫ್ರಿಡ್ಜ್, ಬೈಕ್ ಹೊಂದಲು ಅವಕಾಶವಿದೆ. ಮಾನದಂಡಗಳಿಗೆ ವಿರುದ್ಧವಾಗಿ ಅನರ್ಹರು ಪಡೆದುಕೊಂಡ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.