
ಬೆಂಗಳೂರು: ರಾಜ್ಯದಲ್ಲಿ 22 ಲಕ್ಷ ಅಂತ್ಯೋದಯ, ಬಿಪಿಎಲ್ ಕಾರ್ಡುಗಳು ಪತ್ತೆಯಾಗಿವೆ. ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಆಹಾರ ಇಲಾಖೆ ವೇಗ ನೀಡಿದ್ದು, ಅನರ್ಹ ಪಡಿತರ ಚೀಟಿಗಳ ಪತ್ತೆ ಕುಟುಂಬ ತಂತ್ರಾಂಶದ ಮೊರೆ ಹೋಗಿದೆ.
ರಾಜ್ಯದಲ್ಲಿ 22,62,413 ಅನರ್ಹ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳು ಇರುವುದನ್ನು ಈ ತಂತ್ರಾಂಶದ ಮೂಲಕ ಪತ್ತೆ ಮಾಡಲಾಗಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ಆಹಾರ ಇಲಾಖೆ ಇ- ಆಡಳಿತ ಕೇಂದ್ರಕ್ಕೆ ಮನವಿ ಮಾಡಿದ್ದು, ಈ ತಂತ್ರಾಂಶದಿಂದ ದೊರೆತ ಮಾಹಿತಿಯ ಅನ್ವಯ 10,97,621 ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳು ಪತ್ತೆಯಾಗಿವೆ.
10,54,368 ಕಾರ್ಡುಗಳನ್ನು 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹೊಂದಿದ್ದಾರೆ. 1,06,152 ಕಾರ್ಡ್ ಗಳನ್ನು ಆದಾಯ ತೆರಿಗೆ ಪಾವತಿದಾರರು ಪಡೆದುಕೊಂಡಿದ್ದಾರೆ. 4272 ಪಡಿತರ ಚೀಟಿಗಳು ಕೆಜಿಐಡಿ ಹೆಚ್.ಆರ್.ಎಂ.ಎಸ್.ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ- ಆಡಳಿತ ಕೇಂದ್ರ ಪತ್ತೆ ಮಾಡಿದೆ.
ಹತ್ತು ದಿನಗಳ ಒಳಗೆ ಅನರ್ಹ ಪಡಿತರ ಚೀಟಿಗಳನ್ನು ಮುಕ್ತಾಯಗೊಳಿಸಬೇಕು ಎಂದು ಎಲ್ಲಾ ಜಂಟಿ ಮತ್ತು ಉಪ ನಿರ್ದೇಶಕರಿಗೆ ಆಹಾರ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಸರ್ಕಾರಿ ನೌಕರರು, ಕಾರ್ ಹೊಂದಿರುವುದು ಸೇರಿ 14 ಮಾನದಂಡಗಳನ್ನು ಮುಂದಿಟ್ಟುಕೊಂಡು ಅನರ್ಹರ ಬಿಪಿಎಲ್ ಕಾರ್ಡ್ ಳನ್ನು ರದ್ದುಪಡಿಸುವ ಪ್ರಕ್ರಿಯೆಗೆ ಆಹಾರ ಇಲಾಖೆ ಕ್ರಮಕೈಗೊಂಡಿದೆ.