ಕಲಬುರಗಿ: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೇವೆ ಒದಗಿಸುವ ಎ.ಬಿ.ಆರ್.ಕೆ. ಆರೋಗ್ಯ ಕಾರ್ಡ್ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಹೊಂದಿದ ಜಿಲ್ಲೆಯ ಸಾರ್ವಜನಿಕರು ತಮ್ಮ ಹತ್ತಿರದ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಕರ್ನಾಟಕ-1 ಸೇವಾ ಕೇಂದ್ರಗಳು, ಗ್ರಾಮ ಒನ್ ಸೆಂಟರ್, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯತ), ಇ-ಸೇವಾ ಸಿಂಧು ಕೇಂದ್ರಗಳಲ್ಲಿ ಪಡಿತರ ಚೀಟಿ ಮತ್ತು ಅಧಾರ್ ಕಾರ್ಡ್ ನೀಡಿ ಆರೋಗ್ಯ ಕಾರ್ಡ್ ಪಡೆಯಬಹುದಾಗಿದೆ.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ಪಡೆದ ಬಿ.ಪಿ.ಎಲ್. ಕುಟುಂಬಕ್ಕೆ 1 ವರ್ಷಕ್ಕೆ ಗರಿಷ್ಠ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಮತ್ತು ಎ.ಪಿ.ಎಲ್ ಕುಟುಂಬಕ್ಕೆ ಶೇ.30 ರಷ್ಟು ಚಿಕಿತ್ಸಾ ವೆಚ್ಚದ ರಿಯಾಯಿತಿ ಸಿಗಲಿದ್ದು, ವಾರ್ಷಿಕ ಗರಿಷ್ಟ 1.50 ಲಕ್ಷ ವರೆಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.