ಮಂಗಳೂರು: ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿ ರದ್ದಾಗಿವೆ ಎಂಬ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿಕೆಗೆ ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದು, ಪರಿಷ್ಕರಣೆ ಮಾಡಿದಾಗ ಬಿಪಿಎಲ್ ಅಲ್ಲದೆ ಇರುವವರನ್ನು ಎಪಿಎಲ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮುನಿಯಪ್ಪ, ಎಪಿಎಲ್ ಗೆ ಅರ್ಜಿ ಹಾಕಿದವರನ್ನು ರದ್ದು ಮಾಡುವುದಿಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಫಲಾನುಭವಿಗಳಿಗೆ ಪಡಿತರ ನೀಡುವುದಕ್ಕೆ ಹಣದ ಕೊರತೆಯು ಇಲ್ಲ ಎಂದು ಹೇಳಿದ್ದಾರೆ.
ಎಪಿಎಲ್ ಗೆ ಸಬ್ಸಿಡಿ ದರದಲ್ಲಿ ಪಡಿತರ ಕೊಡುತ್ತಿದ್ದು, ಹೆಚ್ಚಿದವರು ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಸದ್ಯಕ್ಕೆ ಎಪಿಎಲ್ ಗೆ ಸಬ್ಸಿಡಿ ಕೊಡುವುದನ್ನು ನಿಲ್ಲಿಸಿದ್ದೇವೆ. ಪರಿಷ್ಕರಣೆಯ ನಂತರ ಎಪಿಎಲ್ ನವರು ಮುಂದೆ ಬಂದರೆ ಖಂಡಿತ ಪಡಿತರ ನೀಡುತ್ತೇವೆ. ಸಬ್ಸಿಡಿ ಕೊಡುತ್ತೇವೆ. ಒಂದೇ ಒಂದು ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕಾರ್ಡುಗಳು ಇವೆ.6.5 ಕೋಟಿ ಜನರಿದ್ದರೂ 4.5 ಕೋಟಿ ಜನರಿಗೆ ಕಾರ್ಡ್ ನೀಡಿದ್ದೇವೆ. ಅರ್ಹರಲ್ಲದವರು ಹೆಚ್ಚಾಗಿದ್ದಾರೆ ಎನ್ನುವ ಭಾವನೆ ಬಂದಿದೆ. ಪರಿಷ್ಕರಣಿಗೆ ನಿಯಮಾವಳಿ ಹಾಕಿಕೊಂಡಿದ್ದೇವೆ. ಆದಾಯ ತೆರಿಗೆ ಪಾವತಿಸುವವರಿಗೆ, ಕಾರು ಇರುವವರಿಗೆಲ್ಲ ಎಪಿಎಲ್ ಕಾರ್ಡ್ ಎಂದು ಈ ಹಿಂದಿನ ಸರ್ಕಾರವೇ ಈ ನಿಯಮವನ್ನು ಮಾಡಿದೆ. ಅಂತವರು ಇದ್ದರೆ ಅವರನ್ನು ಎಪಿಎಲ್ ಗೆ ಹಾಕ್ತೇವೆ. ಅವರನ್ನು ತೆಗೆದುಹಾಕುವುದಿಲ್ಲ ಎಂದು ಹೇಳಿದ್ದಾರೆ.