ಬೆಂಗಳೂರು: ಬಿಪಿಎಲ್ ಕುಟುಂಬದಲ್ಲಿ ಇಬ್ಬರು ಮುಖ್ಯಸ್ಥರಿದ್ದರೆ ಅಕ್ಕಿ ಹಣ ಸಿಗುವುದಿಲ್ಲ. ಕುಟುಂಬಕ್ಕೆ ಯಾರು ಮುಖ್ಯಸ್ಥರು ಎಂಬುದನ್ನು ಕುಟುಂಬದವರೇ ಸೂಚಿಸಿದ ನಂತರ ಖಾತೆಗೆ ಹಣ ಜಮಾ ಮಾಡಲಾಗುವುದು.
ಜುಲೈ 20ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿ ನೀಡಬೇಕಿದೆ. ಪಡಿತರ ಪಡೆಯುವ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದರೆ ಆ ಕುಟುಂಬದ ಮುಖ್ಯಸ್ಥರು ಯಾರು ಎನ್ನುವ ಸಮಸ್ಯೆ ಇತ್ಯರ್ಥವಾಗುವವರೆಗೆ ಅನ್ನಭಾಗ್ಯ ಯೋಜನೆ ಯಡಿಯ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಹಣ ನೀಡದಿರಲು ಸರ್ಕಾರ ತೀರ್ಮಾನಿಸಿದ್ದು, ಮಾರ್ಗಸೂಚಿ ಪ್ರಕಟಿಸಲಾಗಿದೆ.
ಅಂತ್ಯೋದಯ ಕಾರ್ಡು ಹೊಂದಿದ ಮೂವರು ಮತ್ತು ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ನಗದು ವರ್ಗಾವಣೆ ಸೌಲಭ್ಯ ಸಿಗುವುದಿಲ್ಲ. ಅವರು ಈಗಾಗಲೇ 30 ಕೆಜಿ ಅಕ್ಕಿ ಪಡೆಯುತ್ತಿರುತ್ತಾರೆ. ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ ಆ ಕುಟುಂಬ 170 ರೂ., 5 ಸದಸ್ಯರಿದ್ದರೆ 340 ರೂ., 6 ಸದಸ್ಯರಿದ್ದರೆ 510 ರೂಪಾಯಿ ಪಡೆಯಲಿದೆ. ಹೆಚ್ಚಿನ ಸದಸ್ಯರು ಇದ್ದಲ್ಲಿ ಇದೆ ಅನುಪಾತದಲ್ಲಿ ಹಣ ನೀಡಲಾಗುತ್ತದೆ.
ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯ ಪಡೆಯಲು ಅರ್ಹವಾಗಿವೆ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲು ನಿರ್ಧರಿಸಲಾಗಿದೆ.
ಕುಟುಂಬದ ಮುಖ್ಯಸ್ಥರು ಯಾರು ಎಂಬುದನ್ನು ಕುಟುಂಬದವರೇ ಆಯ್ಕೆ ಮಾಡಿಕೊಳ್ಳಬೇಕು. ಮಹಿಳಾ ಸದಸ್ಯರಿರುವ ಪಡಿತರ ಚೀಟಿಯಲ್ಲಿನ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಬೇಕು. ಜುಲೈ 20ರೊಳಗೆ ಮಾಹಿತಿಯನ್ನು ನೀಡಿದ ಬಿಪಿಎಲ್ ಕುಟುಂಬಗಳಿಗೆ ಆಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಸೌಲಭ್ಯ ದೊರೆಯಲಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕಿದೆ ಎಂದು ಹೇಳಲಾಗಿದೆ.