ಅತ್ಯಂತ ಗೌರವಾನ್ವಿತ ಭಾರತೀಯರಲ್ಲಿ ಒಬ್ಬರಾದ ಮತ್ತು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಬುಧವಾರದಂದು ವಿಧಿವಶರಾಗಿದ್ದಾರೆ. ಹಿರಿಯ ಕೈಗಾರಿಕೋದ್ಯಮಿಯಾದ ಅವರು ಎರಡು ದಶಕಗಳ ಕಾಲ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುವಾಗ ತಮ್ಮ ಸಂಸ್ಥೆಗೆ ಸೇರಿದ ಹಲವಾರು ಕಂಪನಿಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ರತನ್ ಟಾಟಾ ಅವರು ಕೇವಲ ವ್ಯವಹಾರಕ್ಕೆ ಸೀಮಿತವಾಗದೆ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ರಾಷ್ಟ್ರದಾದ್ಯಂತ ಶಿಕ್ಷಣ, ವೈದ್ಯಕೀಯ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಬೆಂಬಲಿಸಿದ್ದರು.
ಅವರು 30 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಅನೇಕ ಯುವ ಉದ್ಯಮಿಗಳಿಗೆ ಸಹಾಯ ಮಾಡಿದ್ದಾರೆ. ಬಹು ವ್ಯವಹಾರಗಳಲ್ಲಿ ಯಶಸ್ಸನ್ನು ಗಳಿಸಿದ ನಂತರ, ರತನ್ ಟಾಟಾ ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಆದರೆ ಇದರಲ್ಲಿ ವಿಫಲರಾಗಿದ್ದರು. ಟಾಟಾ ಇನ್ಫೋಮೀಡಿಯಾ ಬ್ಯಾನರ್ ಅಡಿಯಲ್ಲಿ ಅವರು ಕೇವಲ ಒಂದು ಚಲನಚಿತ್ರವನ್ನು ಸಹ-ನಿರ್ಮಾಣ ಮಾಡಿದ್ದಾರೆ. ಈ ಚಲನಚಿತ್ರವು 2004 ರ ರೋಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ʼಏತ್ಬಾರ್ʼ ಆಗಿತ್ತು. ಇದರಲ್ಲಿ ಅಮಿತಾಬ್ ಬಚ್ಚನ್, ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
2004 ರ ಬಿಡುಗಡೆಯಾದ ಈ ಚಿತ್ರ ಕಾಳಜಿಯುಳ್ಳ ತಂದೆ ಡಾ. ರಣವೀರ್ ಮಲ್ಹೋತ್ರಾ (ಅಮಿತಾಭ್ ಬಚ್ಚನ್) ಸುತ್ತ ಸುತ್ತುತ್ತದೆ, ಅವರು ತಮ್ಮ ಚಿಕ್ಕ ಮಗಳು ರಿಯಾ ಮಲ್ಹೋತ್ರಾ (ಬಿಪಾಶಾ ಬಸು) ಳನ್ನು ಹಿಂಸಾತ್ಮಕ ಪ್ರವೃತ್ತಿ ಹೊಂದಿದ್ದ ಆಕೆಯ ಗೆಳೆಯ ಆರ್ಯನ್ ತ್ರಿವೇದಿ (ಜಾನ್ ಅಬ್ರಹಾಂ) ನಿಂದ ರಕ್ಷಿಸಲು ಬಯಸುತ್ತಾರೆ. ಚಿತ್ರದಲ್ಲಿ ಸುಪ್ರಿಯಾ ಪಿಲ್ಗಾಂವ್ಕರ್, ಟಾಮ್ ಆಲ್ಟರ್, ಅಲಿ ಅಸ್ಗರ್, ಪೃಥ್ವಿ ಝುತ್ಶಿ ಮತ್ತು ಶ್ರುತಿ ಉಲ್ಫತ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಿಕ್ರಮ್ ಭಟ್ ನಿರ್ದೇಶಿಸಿದ ʼಏತ್ಬಾರ್ʼ 1996 ರ ಹಾಲಿವುಡ್ ಚಲನಚಿತ್ರ ಫಿಯರ್‌ನಿಂದ ಸ್ಫೂರ್ತಿ ಪಡೆದಿತ್ತು. ಬಿಡುಗಡೆಯಾದ ನಂತರ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಇದು ಮಿಶ್ರಿತ ಪ್ರತಿಕ್ರಿಯೆಗಳನ್ನು ಪಡೆಯಿತು. ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾದ ರತನ್ ಟಾಟಾ ನಿರ್ಮಾಣದ ಈ ಚಿತ್ರ ತನ್ನ ಬಜೆಟ್ ಅನ್ನು ಮರುಪಡೆಯಲು ವಿಫಲವಾಗಿದ್ದು, ಅದು ಭಾರತದಲ್ಲಿ ಕೇವಲ 4.25 ಕೋಟಿ ನಿವ್ವಳ ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ರೂ. 7.96 ಕೋಟಿ ಗಳಿಸಿತು. ಚಿತ್ರದ ಭಾರೀ ವೈಫಲ್ಯದ ನಂತರ, ಉದ್ಯಮಿ ರತನ್ ಟಾಟಾ ಮತ್ತೆ ಚಲನಚಿತ್ರ ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡಲಿಲ್ಲ.