ರಾಷ್ಟ್ರಪತಿ ಭವನದ ‘ಅಶೋಕ ಹಾಲ್’ ಹಾಗೂ ‘ದರ್ಬಾರ್ ಹಾಲ್’ ಗಳಿಗೆ ಮರುನಾಮಕರಣ ಮಾಡಲಾಗಿದೆ. ಬ್ರಿಟಿಷ್ ಆಡಳಿತಾವಧಿಯಲ್ಲಿ ವಸಾಹತುಶಾಹಿ ಪ್ರತೀಕವಾಗಿದ್ದ ಇವುಗಳಿಗೆ ಅನುಕ್ರಮವಾಗಿ ಅಶೋಕ ಮಂಟಪ ಹಾಗೂ ಗಣತಂತ್ರ ಮಂಟಪ ಎಂದು ಹೆಸರಿಸಲಾಗಿದೆ.
ಇವುಗಳ ಹೆಸರು ಬದಲಾವಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ಸೂಚಿಸಿದ್ದು, ಇಂದು ಈ ಕುರಿತಂತೆ ಅಧಿಕೃತ ಆದೇಶ ಹೊರ ಬಿದ್ದಿದೆ. ಈಗ ಬದಲಾಗಿರುವ ಹೆಸರುಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಲಾಗಿದೆ.
ರಾಷ್ಟ್ರಪತಿ ಭವನದ ಅಶೋಕ ಮಂಟಪ ಹಾಗೂ ಗಣತಂತ್ರ ಮಂಟಪ ಹೆಸರುಗಳು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಲಾಗಿದೆ. ಇನ್ನು ಗಣತಂತ್ರ ಮಂಟಪ (ದರ್ಬಾರ್ ಹಾಲ್) ನಲ್ಲಿ ಬಹು ಮುಖ್ಯ ಸಮಾರಂಭಗಳು, ರಾಷ್ಟ್ರೀಯ ಪ್ರಶಸ್ತಿ ವಿತರಣಾ ಸಮಾರಂಭಗಳು ನಡೆಯುತ್ತಿದ್ದರೆ, ಅಶೋಕ ಮಂಟಪದಲ್ಲಿ ಗಣ್ಯರನ್ನು ಸ್ವಾಗತಿಸಲಾಗುತ್ತದೆ. ಕಳೆದ ವರ್ಷ ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ ಅನ್ನು ಅಮೃತ್ ಉದ್ಯಾನ್ ಎಂದು ಹೆಸರಿಸಲಾಗಿತ್ತು.