ಪಾಲಿ: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಸ್ಥಾನದ ಪಾಲಿ ಜಿಲ್ಲೆಯ ಅರಾವಳಿ ಬೆಟ್ಟಗಳಲ್ಲಿರುವ ರಣಾಕ್‌ಪುರ ಪ್ರದೇಶದಲ್ಲಿ ಗುಲಾಬಿ ಬಣ್ಣದ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳು ಕೂಡ ಖಚಿತ ವ್ಯಕ್ತಪಡಿಸಿದ್ದಾರೆ.
ಭಾರತೀಯ ಚಿರತೆ ಸಾಮಾನ್ಯವಾಗಿ ಮಸುಕಾದ ಹಳದಿಯಿಂದ ಹಳದಿ ಮಿಶ್ರಿತ ಕಂದು ಬಣ್ಣದ ಕೋಟ್ ಅನ್ನು ಹೊಂದಿರುತ್ತದೆ. ಆದರೆ, ಗುಲಾಬಿ ಚಿರತೆಯು ಕೆಂಪು-ಕಂದು ಚರ್ಮ ಮತ್ತು ವಿಭಿನ್ನವಾದ ಕಲೆಗಳನ್ನು ಹೊಂದಿರುತ್ತದೆ. ಈ ಚಿರತೆಯ ಸ್ಟ್ರಾಬೆರಿ ಬಣ್ಣದ ಕೋಟ್ ಅನುವಂಶಿಕ ಕಾರಣದಿಂದಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
ರಣಕ್‌ಪುರ ಮತ್ತು ಕುಂಭಲ್‌ಗಢದಲ್ಲಿ ಸ್ಥಳೀಯರು ಈ ಹಿಂದೆ ಹಲವು ಬಾರಿ ಗುಲಾಬಿ ಬಣ್ಣದ ಚಿರತೆಯನ್ನು ನೋಡಿರುವುದಾಗಿ ಹೇಳುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಸ್ಟ್ರಾಬೆರಿ ಬಣ್ಣದ ಕೋಟ್ ಹೊಂದಿರುವ ಚಿರತೆ ಕೂಡ ಈ ಪ್ರದೇಶದಲ್ಲಿ ಕಾಣಸಿಕ್ಕಿದೆ.
ಉದಯಪುರ ಮೂಲದ ವನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಛಾಯಾಗ್ರಾಹಕ ಹಿತೇಶ್ ಮೋಟ್ವಾನಿ ಅವರು, ನಾಲ್ಕು ದಿನಗಳ ಹುಡುಕಾಟದ ನಂತರ ಚಿರತೆಯ ಫೋಟೋಗಳನ್ನು ಸೆರೆಹಿಡಿದಿರುವುದಾಗಿ ಹೇಳಿದ್ದಾರೆ. ಚಿರತೆಗೆ ಐದರಿಂದ ಆರರ ಆಸುಪಾಸಿನ ವಯಸ್ಸು ಆಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ.
ಕುಂಭಲ್ಗಢ ಅರಣ್ಯ ಪ್ರದೇಶವು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿದೆ. ಇದು 600 ಚದರ ಕಿಲೋಮೀಟರ್ಗಳಷ್ಟು ವ್ಯಾಪಿಸಿದೆ. ಇದು ಭಾರತೀಯ ಚಿರತೆ, ತೋಳ, ಪಟ್ಟೆ ಕತ್ತೆಕಿರುಬ, ಗೋಲ್ಡನ್ ನರಿ ಮತ್ತು ಕೃಷ್ಣಮೃಗ ಸೇರಿದಂತೆ ಇತರ ಜಾತಿಗಳಿಗೆ ನೆಲೆಯಾಗಿದೆ. ಈ ಹಿಂದೆ 2012ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗುಲಾಬಿ ಬಣ್ಣದ ಕೋಟ್‌ನಲ್ಲಿ ಚುಕ್ಕೆಗಳಿರುವ ಚಿರತೆ ಕಾಣಿಸಿಕೊಂಡಿತ್ತು.