ಕಾಳಿಂಗಸರ್ಪ ಹೆಸರು ಹೇಳುತ್ತಿದ್ದಂತೆ ಅನೇಕರು ಭೀತಿಗೊಳ್ಳುತ್ತಾರೆ. ಯಾಕೆಂದರೆ ಅಷ್ಟೊಂದು ವಿಷಕಾರಿ ಸರ್ಪ ಇದಾಗಿದೆ. ಅಂದಹಾಗೆ ಇದೀಗ ಕಾಳಿಂಗಸರ್ಪವು ಬೇರೊಂದು ಹಾವನ್ನು ತಿನ್ನುತ್ತಿರುವ ಫೋಟೋವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ತಲ್ಲಣ ಸೃಷ್ಟಿಸಿದೆ.
ಹೌದು, ಕಾಳಿಂಗ ಸರ್ಪವು ನಾಗರಹಾವನ್ನು ತಿನ್ನುತ್ತಿರುವ ಅಪರೂಪದ ಚಿತ್ರಣವನ್ನು ಭಾರತೀಯ ಅರಣ್ಯ ಸೇವೆಗಳ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಸೆರೆಹಿಡಿದಿದ್ದಾರೆ. ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗಸರ್ಪ ಎನ್ನುವ ಶೀರ್ಷಿಕೆ ನೀಡಿ ಟ್ವಿಟ್ಟರ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಕಾಳಿಂಗ ಸರ್ಪದ ಬಗ್ಗೆ ಇನ್ನಷ್ಟು ಮಾಹಿತಿಯನ್ನೂ ನೀಡಿದ್ದಾರೆ.
ಈ ಹಾವಿನ ವೈಜ್ಞಾನಿಕ ಹೆಸರು ಒಫಿಯೋಫಾಗಸ್ ಹನ್ನಾ. ಒಫಿಯೋಫಾಗಸ್ ಎಂಬ ಪದವು ಗ್ರೀಕ್ ನಿಂದ ಪಡೆಯಲಾಗಿದೆ. ಇದರ ಅರ್ಥ ‘ಹಾವು ಭಕ್ಷಕ’ ಆಗಿದೆ. ಹಾಗೂ ಹನ್ನಾ ಎಂಬ ಪದವು ಗ್ರೀಕ್ ಪುರಾಣಗಳಿಂದ ‘ಮರ-ವಾಸಿಸುವ’ ಎಂಬ ಶಬ್ಧದಿಂದ ಪಡೆಯಲಾಗಿದೆ. ಕಾಳಿಂಗ ಸರ್ಪಕ್ಕೆ ಆಂಗ್ಲ ಭಾಷೆಯಲ್ಲಿ ಕಿಂಗ್ ಕೋಬ್ರಾ ಎಂದು ಕರೆಯುತ್ತಾರೆ. ತನ್ನ ಗೂಡುಗಳನ್ನು ನಿರ್ಮಿಸುವ ಏಕೈಕ ಹಾವು ಇದಾಗಿರುವುದರಿಂದ, ತಾನು ನಿಜವಾದ ರಾಜ ಅಂತಾನೇ ತೋರಿಸಿಕೊಟ್ಟಿದೆ ಈ ಸರ್ಪ.
ಭಾರತದ ನಾಗರಿಕರಾಗಿದ್ದರೆ ಸುಲಭವಾಗಿ ಪಡೆಯಿರಿ ‘ಪಡಿತರ ಚೀಟಿ’
ಇನ್ನೊಂದು ಮಹತ್ವದ ಸಂಗತಿಯನ್ನು ಅಧಿಕಾರಿ ವಿವರಿಸಿದ್ದಾರೆ. ಕಿಂಗ್ ಕೋಬ್ರಾ ಆಹಾರದಲ್ಲಿ ಹೆಚ್ಚಿನವು ಇತರೆ ಹಾವುಗಳನ್ನೇ ಒಳಗೊಂಡಿರುತ್ತವೆ. ಇತರೆ ಹಾವುಗಳನ್ನು ಕಂಡರೆ ಕಾಳಿಂಗ ಸರ್ಪಕ್ಕೆ ಭಾರಿ ಇಷ್ಟ. ಹೊಟ್ಟೆ ಹಸಿವಿಲ್ಲದೇ ಇದ್ದರೂ ಕೂಡ ಬೇರೆ ಹಾವುಗಳನ್ನು ಇವು ಬೇಟೆಯಾಡುತ್ತದೆಯಂತೆ. ಅದರಲ್ಲಿ ಇಲಿ ಹಾವುಗಳೆಂದರೆ ಕಾಳಿಂಗಸರ್ಪದ ನೆಚ್ಚಿನ ಆಹಾರ. ದೊಡ್ಡ ಇಲಿ ಹಾವನ್ನು ಈ ಸರ್ಪ ಹಾಗೆಯೇ ನುಂಗಬಹುದು ಎಂದು ವಿವರಿಸಿದ್ದಾರೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇನ್ನು ಕಾಳಿಂಗ ಸರ್ಪವು ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಆಗಿದ್ದು, ಇದರ ಸರಾಸರಿ ಉದ್ದ 3.18 ರಿಂದ 4 ಮೀಟರ್ ಇರುತ್ತದೆ. ಗರಿಷ್ಠ 5.85 ಮೀಟರ್ವರೆಗೂ ಉದ್ದವಿರುತ್ತದೆ. ಇವು ಇತರೆ ವಿಷಪೂರಿತ ಹಾವುಗಳು, ನಾಗರಹಾವು, ತನ್ನದೇ ಜಾತಿಯ ಚಿಕ್ಕ ಹಾವುಗಳು ಸೇರಿದಂತೆ ಇತರೆ ಹಾವುಗಳು ಈ ಕಾಳಿಂಗಸರ್ಪದ ಆಹಾರವಾಗಿದೆ.