1652 ರಲ್ಲಿ ಮುದ್ರಿಸಲಾದ ಅಪರೂಪದ ನಾಣ್ಯವನ್ನು ಅನಾಮಧೇಯ ಆನ್‌ಲೈನ್ ಬಿಡ್‌ದಾರರಿಗೆ 2.6 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ವಸಾಹತುಶಾಹಿ ನ್ಯೂ ಇಂಗ್ಲೆಂಡ್‌ನಲ್ಲಿ ಮುದ್ರಿಸಲಾದ ಮೊದಲ ನಾಣ್ಯಗಳಲ್ಲಿ ಒಂದನ್ನು ಇತ್ತೀಚೆಗೆ ಕ್ಯಾಂಡಿ ಟಿನ್‌ನಲ್ಲಿ ಇತರ ಬೆಲೆಬಾಳುವ ನಾಣ್ಯಗಳ ಜೊತೆ ಪತ್ತೆ ಹಚ್ಚಲಾಗಿತ್ತು.
ಬೋಸ್ಟನ್‌ನಲ್ಲಿ 1652 ರಲ್ಲಿ ತಯಾರಿಸಲಾದ ಒಂದು ಶಿಲ್ಲಿಂಗ್ ಬೆಳ್ಳಿ ನಾಣ್ಯವು ಈಗ ಆನ್‌ಲೈನ್ ಹರಾಜಿನಲ್ಲಿ 3,50,000 ಡಾಲರ್ ಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿ ತಿಳಿಸಿದೆ. ನಾಣ್ಯವು ಒಂದು ಬದಿಯಲ್ಲಿ ನ್ಯೂ ಇಂಗ್ಲೆಂಡ್‌ನ ಎನ್ಇ ಎಂಬ ಮೊದಲಕ್ಷರಗಳನ್ನು ಹೊಂದಿದೆ. ಹಾಗೂ ಇನ್ನೊಂದು ಬದಿಯಲ್ಲಿ ರೋಮನ್ ಅಂಕಿ XII ಅನ್ನು ಹೊಂದಿದೆ. XII ಶಿಲ್ಲಿಂಗ್‌ನಲ್ಲಿ 12 ಪೆನ್ನಿಗಳನ್ನು ಪ್ರತಿನಿಧಿಸುತ್ತದೆ.
ಈ ನಾಣ್ಯವನ್ನು ಅಮೆರಿಕಾದ ಅನಾಮಧೇಯ ಆನ್‌ಲೈನ್ ಬಿಡ್‌ದಾರರಿಗೆ ಮಾರಾಟ ಮಾಡಲಾಗಿದೆ ಎಂದು ಲಂಡನ್ ಮೂಲದ ಮಾರ್ಟನ್ ಮತ್ತು ಈಡನ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.
ಹರಾಜುದಾರರು ನಾಣ್ಯವನ್ನು ಡಾಲರ್ 3,00,000 ಕ್ಕೆ ಮಾರಾಟ ಮಾಡಲು ನಿರೀಕ್ಷಿಸಿದ್ದರು. ಆದರೆ, ಶುಕ್ರವಾರದ ಹರಾಜಿನಲ್ಲಿ ಅದು ಹೆಚ್ಚಿನ ಬೆಲೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಇದು ವಸಾಹತುಶಾಹಿ ನ್ಯೂ ಇಂಗ್ಲೆಂಡ್‌ನಲ್ಲಿ ಮುದ್ರಿಸಲಾದ ಮೊದಲ ಅಧಿಕೃತ ನಾಣ್ಯವಾಗಿದೆ. 1652 ರ ಮೊದಲು, ಇಂಗ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಸ್ಪ್ಯಾನಿಷ್ ಸಾಮ್ರಾಜ್ಯದ ನಾಣ್ಯಗಳನ್ನು ನ್ಯೂ ಇಂಗ್ಲೆಂಡ್ನಲ್ಲಿ ಕಾನೂನು ಕರೆನ್ಸಿಯಾಗಿ ಬಳಸಲಾಗುತ್ತಿತ್ತು.
ಇನ್ನು ಮೇಲೆ ತಿಳಿಸಲಾದ ನಾಣ್ಯವನ್ನು ಉತ್ಪಾದಿಸಿದ ಟಂಕಸಾಲೆಯು 1682 ರಲ್ಲಿ ಮುಚ್ಚಲ್ಪಟ್ಟಿತ್ತು. ಏಕೆಂದರೆ ಹರಾಜುದಾರರ ಪ್ರಕಾರ, ರಾಜ ಚಾರ್ಲ್ಸ್-2 ಇದನ್ನು ದೇಶದ್ರೋಹವೆಂದು ಪರಿಗಣಿಸಿದ್ದರು ಎನ್ನಲಾಗಿದೆ. ಹೀಗಾಗಿ ನಂತರ ಹೊಸ ನಾಣ್ಯಗಳನ್ನು ಉತ್ಪಾದಿಸಲಾಯಿತು.