ಶಿವಮೊಗ್ಗ: ದೇಶದಲ್ಲಿ ಬಹಳ ಅಪರೂಪ ಎನಿಸಿದ 15 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಸೀತಾ ನದಿ ತೀರದ ನಡಪಾಲ್ ಗ್ರಾಮದಲ್ಲಿ ಭಾನುವಾರ ಪತ್ತೆಯಾಗಿದೆ.
15 ಅಡಿ ಉದ್ದ, 12.5 ಕೆಜಿ ತೂಕದ ಗಂಡು ಕಾಳಿಂಗ ಸರ್ಪ ನಡಪಾಲ್ ಗ್ರಾಮದ ಭಾಸ್ಕರ್ ಶೆಟ್ಟಿ ಅವರ ಮನೆ ಬಳಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಆಗುಂಬೆ ಕಾಳಿಂಗ ಫೌಂಡೇಶನ್ ಡಾ. ಗೌರಿಶಂಕರ್ ಮತ್ತು ತಂಡದವರು ಸ್ಥಳಕ್ಕೆ ತೆರಳಿ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಅದೇ ಪರಿಸರದ ಕಾಡಿನೊಳಗೆ ಬಿಟ್ಟಿದ್ದಾರೆ.
ಆಗುಂಬೆಯಲ್ಲಿ ಕಾಳಿಂಗ ಸರ್ಪ ಸಂಶೋಧನೆಯಲ್ಲಿ ತೊಡಗಿರುವ ಗೌರಿಶಂಕರ್ ಅವರು ನೀಡಿರುವ ಮಾಹಿತಿಯಂತೆ ಥೈಲ್ಯಾಂಡ್ ನಲ್ಲಿ ಸುಮಾರು 18 ಅಡಿ ಉದ್ದದಷ್ಟು ಕಾಳಿಂಗ ಸರ್ಪ ಕಂಡು ಬಂದಿದೆ. ಭಾರತದಲ್ಲಿ ಇದುವರೆಗೂ ಕಾಣಿಸಿಕೊಂಡ ಅತಿ ಉದ್ದದ ಕಾಳಿಂಗ ಸರ್ಪ 15 ಅಡಿಯಷ್ಟು ಇತ್ತು. ಈಗ ಮತ್ತೊಂದು ಅದೇ ಅಳತೆಯ ಕಾಳಿಂಗ ಸರ್ಪ ಸಿಕ್ಕಿದೆ. ಇಷ್ಟು ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಳ್ಳುವುದು ತೀರ ಅಪರೂಪವಾಗಿದೆ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಅತಿ ವಿಷಪೂರಿತ ಹಾವುಗಳಾದ ಕಾಳಿಂಗ ಸರ್ಪಗಳು ಆಗ್ನೇಯ ಏಷ್ಯಾದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಂಡು ಬರುತ್ತದೆ. ಭಯ ಮೂಡಿಸುವಂತಿದ್ದ ಈ ಸರ್ಪ 15 ಅಡಿ ಉದ್ದವಿತ್ತು. ಫೆಬ್ರವರಿಯಿಂದ ಮೇ ತಿಂಗಳ ನಡುವೆ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ಅವುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಹಾವುಗಳನ್ನು ಕಂಡಾಗ ಭಯಪಡದೆ ಅವುಗಳ ಪಾಡಿಗೆ ಅವುಗಳನ್ನು ಬಿಡಬೇಕು. ಅಪಾಯ ಇದ್ದಲ್ಲಿ ಮಾತ್ರ ಹಿಡಿದು ಕಾಡಿನಲ್ಲಿ ಬಿಡಬೇಕು ಎಂದು ಹೇಳಲಾಗಿದೆ.