ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ನಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ ಮನೆಗೆ ಹಿಂತಿರುಗಿದ ಮಹಿಳೆ ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.
ಕೋಯಿಕ್ಕೋಡ್ ಜಿಲ್ಲೆಯ ಚೆವಯೂರ್ ನಲ್ಲಿ ಘಟನೆ ನಡೆದಿದೆ. ಆರೋಪಿಗಳನ್ನು ಗೋಪಿಶ್ ಮತ್ತು ಮೊಹಮದ್ ಶಮೀರ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಕುನ್ನಮಂಗಲಂ ಮೂಲದವರಾಗಿದ್ದಾರೆ. ಇಂದ್ರೇಶ್ ಎಂಬ ಮತ್ತೊಬ್ಬ ಆರೋಪಿ ಕೂಡ 21 ವರ್ಷದ ಮಾನಸಿಕ ಅಸ್ವಸ್ಥೆ ಎಂದು ಹೇಳಲಾದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮನೆಯಲ್ಲಿ ಪೋಷಕರೊಂದಿಗೆ ಜಗಳವಾಡಿದ ಮಹಿಳೆ ತನ್ನ ದ್ವಿಚಕ್ರ ವಾಹನದಲ್ಲಿ ತಿರುಗಾಡಿ ವಯಲ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಗೋಪಿಶ್ ಮತ್ತು ಶಮೀರ್ ನಿಲ್ದಾಣದಲ್ಲಿದ್ದ ಆಕೆಯನ್ನು ಗಮನಿಸಿ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಆರೋಪಿಗಳು ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಕೊಟ್ಟಂಪರಂಬಕ್ಕೆ ಕರೆದುಕೊಂಡು ಹೋಗಿದ್ದಾರೆ. ಲಾಕ್ಡೌನ್ ಕಾರಣ ನಿಲುಗಡೆ ಮಾಡಲಾಗಿದ್ದ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಮೂರನೇ ಆರೋಪಿ ಇಂದ್ರೇಶ್ ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಬಳಿಕ ಮಹಿಳೆಯನ್ನು ಕನ್ನಮಂಗಲ ಆಟೋ ನಿಲ್ದಾಣದ ಬಿಟ್ಟು ಹೊರಟುಹೋಗಿದ್ದಾರೆ. ಮನೆಗೆ ಹೋದ ಮಹಿಳೆ ಲೈಂಗಿಕ ಕಿರುಕುಳದ ಬಗ್ಗೆ ಪೋಷಕರಿಗೆ ತಿಳಿಸಿದ್ದು, ಪೋಷಕರು ಚೆವಯೂರ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ವಿಧಿ ವಿಜ್ಞಾನ ತಜ್ಞರು ಮತ್ತು ಫಿಂಗರ್ ಪ್ರಿಂಟ್ಸ್ ಸ್ಕ್ವಾಡ್ ತನಿಖೆ ಆಧರಿಸಿ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಮೂರನೇ ಆರೋಪಿ ಇಂದ್ರೇಶ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಇಂದ್ರೇಶ್ 2003 ರಲ್ಲಿ ನಡೆದ ಮೂವರ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.