ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಇಬ್ಬರನ್ನು ಹಗ್ಗದಿಂದ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ.
ಅತ್ಯಾಚಾರ ಎಸಗಿದ ಆರೋಪಿ ಮತ್ತು ಐವರು ಗ್ರಾಮಸ್ಥರು ಒಳಗೊಂಡಂತೆ 6 ಜನರ ವಿರುದ್ಧ ಕೇಸ್ ದಾಖಲಾಗಿದೆ. ಬಾಲಕಿ ಮತ್ತು ಆರೋಪಿಯನ್ನು ಹಗ್ಗದಿಂದ ಕಟ್ಟಿ, ಥಳಿಸಲಾಗಿದೆ. ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಾಬತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಪವಿಭಾಗೀಯ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಬಿಲ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಎರಡು ಎಫ್ಐಆರ್ ದಾಖಲಿಸಲಾಗಿದೆ. ಅತ್ಯಾಚಾರ ಎಸಗಿದ 21 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರೊಂದಿಗೆ ಅವರ ಮೇಲೆ ಹಲ್ಲೆ ನಡೆಸಿದ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ ಎಂದು ಹೇಳಿದ್ದಾರೆ.
ಆರೋಪಿ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಆತನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ವಿರುದ್ಧ ಸೆಕ್ಷನ್ 294 ಸೇರಿದಂತೆ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.