ಬೆಂಗಳೂರು: ಸ್ನೇಹಿತರೊಂದಿಗೆ ಸೇರಿ ಪ್ರಿಯಕರನೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಆನೇಕಲ್ ತಾಲೂಕಿನ ಸೂರ್ಯಸಿಟಿಯಲ್ಲಿ ನಡೆದಿದೆ.
ಒಡಿಶಾ ಮೂಲದ ಯುವತಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಉತ್ತರ ಭಾರತ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಆರೋಪಿ ಕಿತ್ತಗಾನಹಳ್ಳಿ ಸಮೀಪ ವಾಸವಾಗಿದ್ದು, ಆತನ ಮನೆಯಿಂದ ಸ್ವಲ್ಪ ದೂರದಲ್ಲೇ ಯುವತಿ ವಾಸವಾಗಿದ್ದು, ಆಕೆಯನ್ನು ಪರಿಚಯಿಸಿಕೊಂಡು ಪ್ರೀತಿಸಿದ್ದಾನೆ. ಕಳೆದವಾರ ಮನೆಗೆ ಆಹ್ವಾನಿಸಿದ್ದಾನೆ. ರಾತ್ರಿ ವೇಳೆ ಆತನ ಮನೆಗೆ ಹೋಗಲು ಯುವತಿ ನಿರಾಕರಿಸಿದಾಗ ನಿಜವಾಗಿ ಪ್ರೀತಿಸುತ್ತಿದ್ದರೆ ಬಾ ಎಂದು ಕರೆದಿದ್ದಾನೆ. ಅದೇ ಮಾರ್ಗವಾಗಿ ಬರುತ್ತಿದ್ದ ತನ್ನ ಸ್ನೇಹಿತನೊಂದಿಗೆ ಬರುವಂತೆ ಬಲವಂತ ಮಾಡಿದ್ದಾನೆ.
ಆತನ ಬಲವಂತದಿಂದ ಯುವತಿ ಪ್ರಿಯಕರನ ಸ್ನೇಹಿತನೊಂದಿಗೆ ಮನೆಗೆ ಆಗಮಿಸಿದ್ದಾಳೆ. ಈ ವೇಳೆ ಮತ್ತು ಬರುವ ಔಷಧ ನೀಡಿ ಪ್ರಿಯಕರ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದಾರೆ. ಯುವತಿಗೆ ಎಚ್ಚರವಾದ ಬಳಿಕ ಮನೆಗೆ ಬಿಟ್ಟು ಬಂದಿದ್ದಾರೆ. ಯುವತಿ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ ಸೂರ್ಯಸಿಟಿ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಸಂತ್ರಸ್ತೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.