ಮದುವೆಯಾಗುವ ಉದ್ದೇಶದಿಂದ ಸಹಮತದೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮದುವೆಯ ಉದ್ದೇಶವಿಲ್ಲದೆ ವ್ಯಕ್ತಿ ಸುಳ್ಳು ಭರವಸೆ ನೀಡಿ ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಬಂಧ ಬೆಳೆಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಬಹುದಾಗಿದೆ ಎಂದು ಹೈಕೋರ್ಟ್ ಉಲ್ಲೇಖಿಸಿದ್ದು, ಈ ಬಗ್ಗೆ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಪ್ರಕರಣಗಳನ್ನು ವಜಾ ಮಾಡಲಾಗಿದೆ.
ಇಡುಕ್ಕಿ ಮೂಲದ ತನ್ನ ಸಂಬಂಧಿ ಮಹಿಳೆಗೆ ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರು ದಾಖಲಾಗಿದ್ದು, ಆರೋಪಿ ದೈಹಿಕ ಸಂಬಂಧದ ನಂತರ ಮಹಿಳೆಯನ್ನು ಕಳುಹಿಸಿ, ಬೇರೆ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಮಹಿಳೆಯ ಪರವಾಗಿ ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ಜೊತೆಗೆ ದಂಡ ವಿಧಿಸಿತ್ತು. ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿ ಉದ್ದೇಶಪೂರ್ವಕವಾಗಿ ಸುಳ್ಳು ಭರವಸೆ ನೀಡಿ ಸಂಬಂಧ ಬೆಳೆಸಿದ್ದಾನೆ ಎನ್ನುವುದಕ್ಕೆ ಸೂಕ್ತವಾದ ಸಾಕ್ಷ್ಯವಿಲ್ಲ ಎಂದು ಹೇಳಿ ಆರೋಪಿಗೆ ವಿಧಿಸಿದ ದಂಡ ಮತ್ತು ಶಿಕ್ಷೆಯನ್ನು ವಜಾಗೊಳಿಸಿದೆ.
ಸಂಬಂಧಿತ ಕಾನೂನಿನ ಸಮಗ್ರ ವಿಶ್ಲೇಷಣೆಯ ನಂತರ, ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಕಾನೂನು ನಿಲುವು ಸ್ಪಷ್ಟವಾಗಿದೆ ಎಂದು ಗಮನಿಸಿದೆ ತೀರ್ಪು ನೀಡಿದೆ. ವಿವಾಹದ ಭರವಸೆಯ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ಯಾವಾಗ ಅತ್ಯಾಚಾರಕ್ಕೆ ಕಾರಣವಾಗಬಹುದು ಎಂಬುದನ್ನು ವಿವರಿಸಿ ಗಮನಾರ್ಹ ತೀರ್ಪು ನೀಡಿದೆ.
ವಿವಾಹದ ಸುಳ್ಳು ಭರವಸೆಯ ಮೇಲೆ ಅತ್ಯಾಚಾರದ ಅಪರಾಧಕ್ಕಾಗಿ ಪುರುಷನ ಶಿಕ್ಷೆಯನ್ನು ಬದಿಗಿಟ್ಟು, ಸಂತ್ರಸ್ತೆಯೊಂದಿಗೆ ಲೈಂಗಿಕ ಕ್ರಿಯೆಯ ನಂತರ ಆರೋಪಿಯು ತಕ್ಷಣವೇ ಮತ್ತೊಂದು ವಿವಾಹವನ್ನು ಮಾಡಿಕೊಂಡಿರುವುದರಿಂದ, ಅದು ಒಪ್ಪಿಗೆಯ ಕೊರತೆ ಉಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.