ಬೆಂಗಳೂರು: 11 ವರ್ಷದ ಹಿಂದಿನ ರೇಪ್ ಅಂಡ್ ಮರ್ಡರ್ ಕೇಸ್ ಅನ್ನು ಸಿಐಡಿ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ.
ನರಸಿಂಹಮೂರ್ತಿ, ದೀಪಕ್, ಹರಿಪ್ರಸಾದ್ ಬಂಧಿತರು ಎಂದು ಹೇಳಲಾಗಿದೆ. 2013ರ ಫೆಬ್ರವರಿ 15ರಂದು ಮಹಿಳೆಯನ್ನು ಆರೋಪಿಗಳು ಕೊಲೆ ಮಾಡಿದ್ದರು. ಬ್ಯಾಂಕ್ ನಲ್ಲಿ ನರಸಿಂಹಮೂರ್ತಿ ಮತ್ತು ಹರಿಪ್ರಸಾದ್ ಅವರು ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್ ನಲ್ಲಿ ಮಹಿಳೆಯ ಪ್ರತಿ ಬಾಲಕೃಷ್ಣ ಪೈ ಕೆಲಸ ಮಾಡುತ್ತಿದ್ದರು.
ಚಿಕ್ಕಜಾಲ ಸಮೀಪದ ನೀಲಗಿರಿ ತೋಪಿನಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಅನುಮಾನದ ಮೇಲೆ ಮಹಿಳೆಯ ಪತಿಯನ್ನು ಪೊಲೀಸರು ಬಂಧಿಸಿದ್ದರು. ಕೆಲವು ದಿನಗಳ ನಂತರ ಕೊಲೆಯಲ್ಲಿ ಗಂಡನ ಪಾತ್ರವಿಲ್ಲವೆಂದು ಗೊತ್ತಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಚಿಕ್ಕಜಾಲ ಠಾಣೆ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು.
ಮಹಿಳೆಯ ಪತಿ ಬಾಲಕೃಷ್ಣ ಪೈ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಸ್ತೃತ ತನಿಖೆಗಳಾಗಿ ಹೈಕೋರ್ಟ್ ಸಿಐಡಿಗೆ ಆದೇಶ ನೀಡಿತ್ತು. ಸಿಐಡಿ ತನಿಖೆಗೆ ನಡೆಸಿದಾಗ ಇವರ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ದೀಪಕ್ ವಿಚಾರಣೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ನರಸಿಂಹಮೂರ್ತಿ, ಸಹಚರ ಹರಿಪ್ರಸಾದ್ ಕೈವಾಡ ಇರುವುದು ಗೊತ್ತಾಗಿತ್ತು. ಇಬ್ಬರೂ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದರು. ಚಿಕ್ಕಜಾಲ ನೀಲಗಿರಿ ತೋಪಿನಲ್ಲಿ ಶವ ಎಸೆದು ಪರಾರಿಯಾಗಿದ್ದರು. ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯ ಸಂಗ್ರಹಿಸಿ ಸಿಐಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೂವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.