ಬೆಂಗಳೂರು: ಸಹೋದರನ ಸ್ನೇಹಿತನಿಂದಲೇ ನಿರಂತರ ಅತ್ಯಾಚಾರಕ್ಕೆ ಒಳಗಾದ 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನೇಪಾಳ ಮೂಲದ ಗೌತಮ್(32) ಬಂಧಿತ ಆರೋಪಿ. ಪೋಷಕರನ್ನು ಕಳೆದುಕೊಂಡಿರುವ ಬಾಲಕಿ ನೇಪಾಳದಿಂದ ನಗರಕ್ಕೆ ಬಂದಿದ್ದು, ಸಹೋದರನೊಂದಿಗೆ ಹೆಚ್ಎಸ್ಆರ್ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಆಕೆಯ ಸಹೋದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು, ಆತನ ಸ್ನೇಹಿತನಾಗಿದ್ದ ಆರೋಪಿ ಬಾಲಕಿಗೆ ಕೂಡ ಪರಿಚಯವಾಗಿದ್ದ. ಬಾಲಕಿ ಒಬ್ಬಳೇ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಹೋಗಿ ಅತ್ಯಾಚಾರ ಎಸಗುತ್ತಿದ್ದ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಚಾರ ಆಕೆಯ ಸಹೋದರನಿಗೆ ತಡವಾಗಿ ಗೊತ್ತಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.