ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಸೂಚಿಸಿದೆ. ಕೊಠಡಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಪರೀಕ್ಷೆ ಬರೆಯಲು ಆರೋಪಿಯನ್ನು ಜೈಲಿನಿಂದಲೇ ಕರೆತರಬೇಕು. ಪರೀಕ್ಷೆ ಬರೆದ ನಂತರ ಜೈಲಿಗೆ ಕರೆದುಕೊಂಡು ಹೋಗಬೇಕು. ಕೈಗೆ ಬೇಡಿ ಹಾಕಬಾರದು. ಭದ್ರತಾ ಸಿಬ್ಬಂದಿ ಸಮವಸ್ತ್ರ ಧರಿಸಬಾರದು. ಆರೋಪಿಯೇ ಭದ್ರತೆ ವೆಚ್ಚವನ್ನು ಭರಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಜೈಲಿನಲ್ಲಿದ್ದಾನೆ. ಇದು ಲವ್ ಪ್ರಕರಣ. ಬಲವಂತದ ಅತ್ಯಾಚಾರವಲ್ಲ. ಮಾರ್ಚ್ 15 ರಿಂದ 31ರವರೆಗೆ ಬಿಕಾಂ ಪರೀಕ್ಷೆ ನಡೆಯುತ್ತಿದ್ದು, ಈ ಅವಧಿಗೆ ಜಾಮೀನು ನೀಡಬೇಕೆಂದು ಆರೋಪಿ ಪರ ವಕೀಲರು ಮನವಿ ಮಾಡಿದ್ದರು.
ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಆರೋಪಿ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ಬರೆಯಲು ಹೈಕೋರ್ಟ್ ಅವಕಾಶ ನೀಡಿದೆ ಎನ್ನಲಾಗಿದೆ.