ದಾವಣಗೆರೆ: ಮಲಮಗಳ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ದಾವಣಗೆರೆಯ ಮಕ್ಕಳ ಸ್ನೇಹಿ ಮತ್ತು FTSC-1ನೇ ನ್ಯಾಯಾಲಯ 20 ವರ್ಷ ಲೈಲು ಶಿಕ್ಷೆ, 22 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ವ್ಯಕ್ತಿ ಬಾಗಲಕೋಟೆಯವನಾಗಿದ್ದು, ಸಂತ್ರಸ್ತೆಯ ತಾಯಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿ ದಾವಣಗೆರೆಯಲ್ಲಿ ನೆಲೆಸಿದ್ದರು. ಒಂದೂವರೆ ವರ್ಷದ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ತಿಳಿದ ಬಾಲಕಿಯ ತಾಯಿ ಬೇರೆ ಯುವಕನೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬಾಲಕಿಯನ್ನು ಪುಸಲಾಯಿಸಿ ಬಾಲಕಿಯನ್ನು ಕರೆದೊಯ್ದ ಆರೋಪಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಗರ್ಭಿಣಿಯಾದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಂತ್ರಸ್ತೆಯ ತಾಯಿ ಮಹಿಳಾ ಪೊಲೀಸ್ ಆಣೆಗೆ ಪುತ್ರಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಡಿವೈಎಸ್ಪಿ ನಾಗೇಶ್ ಐತಾಳ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಮಕ್ಕಳ ಸ್ನೇಹಿ ಮತ್ತು FTSP -1ನೇ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ ಎನ್. ಅವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಗೆ ಜನಿಸಿದ ಮಗುವಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯಪ್ಪ ಕೆ.ಜಿ. ಅವರು ವಾದ ಮಂಡಿಸಿದ್ದರು.