ಚಿತ್ರದುರ್ಗ: ಪುತ್ರಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾದ ಬಳಿಕ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ ವ್ಯಕ್ತಿಗೆ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಸಂತ್ರಸ್ತ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ 3 ಲಕ್ಷ ರೂಪಾಯಿ ಹಾಗೂ ತಂದೆಯಿಂದ ವಸೂಲಿ ಮಾಡಿದ ದಂಡದಲ್ಲಿ 30 ಸಾವಿರ ರೂ. ಪರಿಹಾರ ರೂಪದಲ್ಲಿ ನೀಡಲು ಆದೇಶಿಸಲಾಗಿದೆ.
ಹಿರಿಯೂರು ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ 2019 ಏಪ್ರಿಲ್ 16ರಂದು ಕೃತ್ಯ ನಡೆದಿದ್ದು, ಪತ್ನಿ ಮೃತಪಟ್ಟ ನಂತರ 16 ವರ್ಷದ ಪುತ್ರಿಯ ಮೇಲೆ ಆರೋಪಿ ತಂದೆ ನಿರಂತರ ಅತ್ಯಾಚಾರ ಎಸಗಿದ್ದು ಗರ್ಭಿಣಿಯಾಗಿದ್ದಳು. ಗರ್ಭಪಾತದ ನಂತ ಭ್ರೂಣ ಹೂತು ಹಾಕಿ ಸಾಕ್ಷ್ಯ ನಾಶಪಡಿಸಲು ಆರೋಪಿ ಯತ್ನಿಸಿದ್ದ. ಈ ಬಗ್ಗೆ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶ ಬನ್ನಿಹಟ್ಟಿ ಆರ್. ಹನುಮಂತಪ್ಪ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.