ದಾವಣಗೆರೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡವನ್ನು ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) ವಿಶೇಷ ನ್ಯಾಯಾಧೀಶ ಶ್ರೀಪಾದ್ ಎನ್. ಅವರು ತೀರ್ಪು ನೀಡಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಿದುರ್ಗಾ ಗ್ರಾಮದ ಮಹಿಳೆ ತಮ್ಮ ಮಗಳ ಮೇಲೆ ಆಗಿರುವ ಲೈಂಗಿಕ ಅತ್ಯಾಚಾರದ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಚನ್ನಗಿರಿ ಠಾಣೆಯ ತನಿಖಾಧಿಕಾರಿಯಾಗಿದ್ದ ಗಜೇಂದ್ರಪ್ಪ ಕೆ.ಎಸ್. ಅವರು ತನಿಖೆ ಕೈಗೊಂಡು, ಆರೋಪಿ ವಿರುದ್ಧ ಅಪರಾಧಕ್ಕೆ ಸಂಬಂಧಿಸಿದಂತೆ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) ವಿಶೇಷ ನ್ಯಾಯಾಧೀಶ ಶ್ರೀಪಾದ್ ಎನ್. ಇವರು ದೋಷಾರೋಪಣಾ ಪಟ್ಟಿಯ ಅನುಸಾರ ಸಂಪೂರ್ಣ ವಿಚಾರಣೆ ನಡೆಸಿ, ಆರೋಪವು ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ 20 ವರ್ಷಗಳ ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಿದ್ದಾರೆ. ದಂಡವನ್ನು ಪಾವತಿಸದೇ ಇದ್ದ ಪಕ್ಷದಲ್ಲಿ ಒಂದು ವರ್ಷಗಳ ಅವಧಿಗೆ ಆರೋಪಿಯನ್ನು ಕಾರಾಗೃಹ ವಾಸ ಅನುಭವಿಸುವಂತೆ ಆದೇಶ ನೀಡಿರುತ್ತಾರೆ. ಸಂತ್ರಸ್ಥೆಗೆ ಪರಿಹಾರ ರೂಪದಲ್ಲಿ 5,50,000 ರೂ.ಪರಿಹಾರ ನೀಡುವ ಸಲುವಾಗಿ ಜಿಲ್ಲಾ ಉಚಿತ ಸೇವಾ ಪ್ರಾಧಿಕಾರಕ್ಕೆ ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಹಿಂದೆ ಅಭಿಯೋಜಕರಾಗಿದ್ದ ಶೌಕತ್ ಅಲಿ ಹಾಗೂ ಪ್ರಸ್ತುತ ವಿಶೇಷ ಸರ್ಕಾರಿ ಅಭಿಯೋಜಕರಾಗಿರುವ ರೇಖಾ ಎಸ್. ಕೋಟೆಗೌಡರ್ ಅವರು ಪೋಕ್ಸೋ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.