ದಾವಣಗೆರೆ: ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎಸಗಿದ ಅಪರಾಧಕ್ಕೆ ಆರೋಪಿಗೆ ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ದಾವಣಗೆರೆಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ್ ಎನ್. ಅವರು ತೀರ್ಪು ನೀಡಿದ್ದಾರೆ.
ಹದಡಿ ಪೋಲಿಸ್ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದ ವ್ಯಕ್ತಿಯೊಬ್ಬರು, ತಮ್ಮ ಮಗಳ ಮೇಲೆ ಆಗಿರುವ ಲೈಂಗಿಕ ಅತ್ಯಾಚಾರದ ಬಗ್ಗೆ ಹದಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹದಡಿ ಪೋಲಿಸ್ ಠಾಣಾ ಪೊಲೀಸ್ ತನಿಖಾಧಿಕಾರಿ ಹೆಚ್. ಗುರುಬಸವರಾಜ್ ಅವರು, ಪ್ರಕರಣದ ಸಂಪೂರ್ಣ ತನಿಖೆಯನ್ನು ಮಾಡಿ ಆರೋಪಿ ವಿರುದ್ಧ ಅಪರಾಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ(ಪೋಕ್ಸೋ) ವಿಶೇಷ ನ್ಯಾಯಾಧೀಶರಾದ ಎನ್.ಶ್ರೀಪಾದ್ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದ್ದು, ದಂಡವನ್ನು ಪಾವತಿಸದೇ ಇದ್ದ ಪಕ್ಷದಲ್ಲಿ ಒಂದೂವರೆ ವರ್ಷಗಳ ಅವಧಿಗೆ ಆರೋಪಿಯನ್ನು ಕಾರಾಗೃಹ ವಾಸ ಅನುಭವಿಸುವಂತೆ ಆದೇಶಿಸಿದ್ದಾರೆ. ಸಂತ್ರಸ್ಥೆಗೆ ಪರಿಹಾರ ರೂಪದಲ್ಲಿ 4,00,000 ರೂ. ಪರಿಹಾರ ನೀಡುವಂತೆ ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಹಿಂದಿನ ಅಭಿಯೋಜಕರಾಗಿ ರೇಖಾ ಎಸ್. ಕೋಟೆಗೌಡರ್ ವಿಶೇಷ ಸರ್ಕಾರಿ ಅಭೀಯೋಜಕರಾಗಿ ಪೋಕ್ಸೋ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.