
ಬೆಂಗಳೂರು: ನಟಿ ರನ್ಯಾ ರಾವ್ ಅವರಿಂದ ಚಿನ್ನ ಕಳ್ಳ ಸಾಗಣೆ ವೇಳೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ವಿರುದ್ಧ ಸಿಐಡಿ ವಿಚಾರಣೆ ವಹಿಸಿ ಹೊರಡಿಸಿದ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ.
ಈ ಆದೇಶ ಹೊರಡಿಸಿದ್ದ 24 ಗಂಟೆಯೊಳಗೆ ಸರ್ಕಾರ ಆದೇಶ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರೇ ಇದರ ತನಿಖೆ ನಡೆಸಲಿದ್ದಾರೆ. ಇದೇ ಆರೋಪ ಸಂಬಂಧ ನಟಿ ರನ್ಯಾ ರಾವ್ ಅವರ ಮಲತಂದೆ ಹಾಗೂ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್ ವಿರುದ್ಧ ದಾಖಲಾದ ಆರೋಪದ ಕುರಿತಾಗಿ ಗೌರವ ಗುಪ್ತಾ ಅವರೇ ತನಿಖೆ ನಡೆಸುತ್ತಿದ್ದಾರೆ.
ಒಂದೇ ಪ್ರಕರಣದಲ್ಲಿ ಎರಡು ಸಂಸ್ಥೆಗಳ ವಿಚಾರಣೆ ಸೂಕ್ತವಲ್ಲ. ಅಲ್ಲದೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿ ತನಿಖೆ ನಡೆಸುವಾಗ ಮತ್ತೊಂದೆಡೆ ಎಸ್ಪಿ ದರ್ಜೆ ಅಧಿಕಾರಿಯ ವಿಚಾರಣೆ ನಡೆಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಸಿಐಡಿ ವಿಚಾರಣೆಯನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.