ಗುರುವಾರ ರಣಜಿ ಟ್ರೋಫಿಯ ಮೂಲಕ ಕ್ರಿಕೆಟ್ ಅಂಗಳಕ್ಕೆ ಕಂಬ್ಯಾಕ್ ಆಗಿರುವ ವೇಗಿ ಶ್ರೀಶಾಂತ್, ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದಿದ್ದಾರೆ. 39 ವರ್ಷದ ಶ್ರೀಶಾಂತ್ ಮೇಘಾಲಯದ ವಿರುದ್ಧ ತಮ್ಮ ಮರು ಪ್ರವೇಶದ ನಂತರ ಮೊದಲ ಪಂದ್ಯವನ್ನು ಆಡಿದ್ದಾರೆ. 11.4 ಓವರ್ ಬೌಲ್ ಮಾಡಿ ಕೇವಲ 40 ರನ್ ನೀಡಿದ ಶ್ರೀಶಾಂತ್, ಆರ್ಯನ್ ಬೋರಾ ಹಾಗೂ ಸಂಗ್ಮಾ ಅವರನ್ನ ಪೆವಿಲಿಯನ್ ಗೆ ಮರಳುವಂತೆ ಮಾಡಿದರು.
ಒಂಭತ್ತು ವರ್ಷಗಳ ದೀರ್ಘ ಅಂತರದ ನಂತರ ಪ್ರಥಮ ದರ್ಜೆ ಕ್ರಿಕೆಟ್ ಗೆ ಮರಳಲು ಕೇರಳ ಎಕ್ಸ್ಪ್ರೆಸ್ ಶ್ರೀಶಾಂತ್ ಉತ್ಸುಕರಾಗಿದ್ದರು. ಪಂದ್ಯಕ್ಕು ಮೊದಲು ಬುಧವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೆಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.
ಇತ್ತೀಚೆಗೆ, ಐಪಿಎಲ್ 2022 ಹರಾಜಿನಲ್ಲಿ ಶ್ರೀಶಾಂತ್ ತಮ್ಮ ಹೆಸರನ್ನು ಸಹ ನೋಂದಾಯಿಸಿಕೊಂಡಿದ್ದರು. ಆದರೆ ಮೆಗಾ ಹರಾಜಿನಲ್ಲಿ ಅವರ ಹೆಸರಾಗಲೀ, ಅವರ ಯಾವುದೇ ಸುದ್ದಿಯಾಗಲೀ ಹೊರಬಿದ್ದಿಲ್ಲ. ಶ್ರೀಶಾಂತ್ ತಮ್ಮ ಬೇಸ್ ಮೊತ್ತವನ್ನು ಐವತ್ತು ಲಕ್ಷ ಫಿಕ್ಸ್ ಮಾಡಿದ್ದರು, ಆದರೆ ಐಪಿಎಲ್ ಯಾವುದೇ ಫ್ರಾಂಚೈಸಿಗಳು ಅವರ ಕಡೆ ಗಮನ ಹರಿಸಲಿಲ್ಲ.
ಇದರ ನಂತರ ಶ್ರೀಶಾಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಡು ಹಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಪೋಸ್ಟ್ ಗೆ ನೆವರ್ ಗಿವ್ ಅಪ್ ಎನ್ನುವ ಶೀರ್ಷಿಕೆ ನೀಡಿದ್ದರು. ಬಹುಶಃ ಆ ಪೋಸ್ಟ್ ಮೂಲಕ ತಮ್ಮ ಕಂಬ್ಯಾಕ್ ಬಗ್ಗೆ ಸುಳಿವು ನೀಡುವ ಪ್ರಯತ್ನ ಮಾಡಿದ್ದರು ಎನ್ನಿಸುತ್ತಿದೆ. ಒಟ್ಟಿನಲ್ಲಿ ಹಲವು ವಿವಾದಗಳಿಂದ ಕ್ರಿಕೆಟ್ ಲೋಕದಿಂದ ದೂರವಾಗಿದ್ದ ಶ್ರೀಶಾಂತ್, ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಪ್ರಬಲ ಕಂಬ್ಯಾಕ್ ಮಾಡಿದ್ದಾರೆ.