ಕೊಲಂಬೋ: ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ದ್ವೀಪ ದೇಶ ಶ್ರೀಲಂಕಾದ ಹೊಸ ಪ್ರಧಾನಿಯಾಗಿ ಹಿರಿಯ ಶಾಸಕ ರಾನಿಲ್ ವಿಕ್ರಮಸಿಂಘೆ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ದೇಶಕ್ಕೆ ಸ್ಥಿರತೆಯನ್ನು ತರುವ ಪ್ರಯತ್ನದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಸರ್ಕಾರ ವಿರೋಧಿ ಪ್ರತಿಭಟನಾಕಾರರ ಮೇಲೆ ಬೆಂಬಲಿಗರು ನಡೆಸಿದ ಹಿಂಸಾತ್ಮಕ ದಾಳಿಯ ನಂತರ ಅಧ್ಯಕ್ಷರ ಸಹೋದರ ಮಹಿಂದಾ ರಾಜಪಕ್ಸೆ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯಿಂದ ಕ್ಯಾಬಿನೆಟ್ ವಿಸರ್ಜನೆಗೊಂಡಿದೆ.
ಮಹಿಂದಾ ರಾಜಪಕ್ಸೆ ರಾಜಧಾನಿ ಕೊಲಂಬೊದಿಂದ ಓಡಿಹೋಗಿ ದೇಶದ ಪೂರ್ವ ಕರಾವಳಿಯಲ್ಲಿರುವ ಟ್ರಿಂಕೋಮಲಿ ನೌಕಾನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ. ವಿಕ್ರಮಸಿಂಘೆ ಅವರ ಆಯ್ಕೆ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಲಂಕಾದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸುವ ಮತ್ತು ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿ ನಡೆದಿದೆ.