ಮಂಡ್ಯ: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜಲಾಶಯಗಳು ಭರ್ತಿಯಾಗಿರುವುದರಿಂದ ನದಿಗಳಿಗೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರಪ್ರದೇಶಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.
ಇದೇ ರೀತಿ ಕೆ.ಆರ್.ಎಸ್ ಜಲಾಶಯದಿಂದ ಕಾವೇರಿ ನದಿಗೆ ನೀರು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ವೀಕೆಂಡ್ ಬೆನ್ನಲ್ಲೇ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಅಲ್ಲದೇ ಪ್ರವಾಸಿಗರು ಪಕ್ಷಿಧಾಮದಲ್ಲಿ ದೋಣಿ ವಿಹಾರಕ್ಕೆ ತೆರಳುವುದು ಸಾಮಾನ್ಯ. ಕೆ.ಆರ್.ಎಸ್.ನಿಂದ ಕಾವೇರಿ ನದಿಗೆ ನೀರು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಇಂದಿನಿಂದ ತಾತ್ಕಲಿಕವಾಗಿ ದೋಣಿ ವಿಹಾರ ನಿಷೇಧಿಸಲಾಗಿದೆ.
ಮುಂದಿನ ಆದೇಶದವರೆಗೂ ದೋಣಿ ವಿಹಾರ ಬಂದ್ ಆಗಲಿದ್ದು, ಪ್ರವಾಸಿಗರಿಗೆ ರಂಗನತಿಟ್ಟು ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗ ತಿಳಿದಿದೆ.
ಕೆ.ಆರ್.ಎಸ್ ಸಂಪೂರ್ಣ ಭರ್ತಿಯಾಗಿದ್ದು. ಇಂದು ಕಾವೇರಿ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಡ್ಯಾಂ ನ 10 ಕ್ರಸ್ಟ್ ಗೇಟ್ ಗಳ ಮೂಲಕ ಹಾಲ್ನೊರೆಯಂತೆ ನೀರು ರಭಸದಿಂದ ಧುಮ್ಮಿಕ್ಕುತ್ತಿದ್ದು, ಸಂಜೆ ವೇಳೆಗೆ ಡ್ಯಾಂ ನ ಹೊರ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.