ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಗುಳಿದ್ರೂ ಅವ್ರ ಪ್ರಸಿದ್ಧಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಐಪಿಎಲ್ ಮಾತ್ರವಲ್ಲ ಅನೇಕ ವಿಷ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸದಾ ಸುದ್ದಿಯಲ್ಲಿರುತ್ತಾರೆ. ಧೋನಿ ಅನೇಕ ಯುವಕರಿಗೆ ಮಾದರಿಯಾಗುವ ಕೆಲಸ ಮಾಡ್ತಿದ್ದಾರೆ. ಅದ್ರಲ್ಲಿ ಕೃಷಿ ಮುಖ್ಯವಾದದ್ದು. ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್ ಆಕರ್ಷಣೆಯ ಬಿಂದುವಾಗಿದೆ. ಈ ಹಿಂದೆ ತರಕಾರಿಗಳು ಮತ್ತು ಸ್ಟ್ರಾಬೆರಿ ಬೆಳೆದು ಸುದ್ದಿಯಾಗಿದ್ದ ಮಹಿ ಫಾರ್ಮ್ ಹೌಸ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.
ಧೋನಿ ತಮ್ಮ ತೋಟದಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಸುಧಾರಿತ ಗೋಧಿ ಬೆಳೆ ಬೆಳೆದಿದ್ದಾರೆ. ಅದೀಗ ಕಟಾವಿಗೆ ಬಂದಿದೆ. ಧೋನಿ ತಮಗಾಗಿ ಈ ಗೋಧಿ ಬೆಳೆದಿದ್ದಾರೆ. ಧೋನಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಬೆಳೆದಿರುವ ಗೋಧಿ ತಳಿಯ ಹೆಸರು ಸಿಆರ್ಡಿ ಗೋಧಿ 1.
ಸಿಆರ್ಡಿ ಗೋಧಿ 1 ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಈ ಪ್ರಭೇದದಲ್ಲಿ ಸತುವು 42ಪಿಪಿಎಂ ಆಗಿದೆ. ಉಳಿದ ಗೋಧಿ ತಳಿಗಳಲ್ಲಿ ಸತುವು 32ಪಿಪಿಎಂ ಇರುತ್ತದೆ. ಇದರ ಕಾಂಡ ಬಲವಾಗಿದ್ದು, ಸಸ್ಯ ಕೆಳಗೆ ಬೀಳುವ ಸಾಧ್ಯತೆ ಕಡಿಮೆಯಿರುತ್ತದೆ. ಇದರ ಧಾನ್ಯ ದೊಡ್ಡದಾಗಿರುತ್ತದೆ. ಸಾವಿರ ಧಾನ್ಯಗಳ ತೂಕ 56 ಗ್ರಾಂ ಇರುತ್ತದೆ. ಇತರ ಪ್ರಭೇದಗಳಲ್ಲಿ ಅದೇ ಸಂಖ್ಯೆಯ ತೂಕವು 46 ಗ್ರಾಂ ಆಗಿರುತ್ತದೆ. ಈ ತಳಿಯಲ್ಲಿ ಒಂದು ಎಕರೆಯಲ್ಲಿ ಬಿತ್ತನೆ ಮಾಡಲು 55 ಕೆಜಿ ಬೀಜ ಬೇಕಾಗುತ್ತದೆ. ಇದನ್ನು ನವೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಬಿತ್ತಲಾಗುತ್ತದೆ.
ಧೋನಿ ತಮ್ಮ ಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ. ಹೊಸ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸುತ್ತಿದ್ದಾರೆ. ಆಧುನಿಕ ಕೃಷಿಗೆ ಧೋನಿ ಮಾದರಿಯಾಗ್ತಿದ್ದಾರೆ.