ಇತ್ತೀಚೆಗಷ್ಟೇ ಮಾಧ್ಯಮದ ಜೊತೆ ಮಾತನಾಡಿದ್ದ ಬಾಲಿವುಡ್ ನಟ ರಣಬೀರ್ ಕಪೂರ್, ಅವಕಾಶ ಸಿಕ್ಕರೆ ತಾವು ಪಾಕಿಸ್ತಾನದ ಚಿತ್ರಗಳಲ್ಲಿಯೂ ನಟಿಸಲು ಸಿದ್ದ ಎಂದು ಹೇಳಿಕೊಂಡಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಇದೀಗ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ ‘ತೂ ಜೂಟಿ ಮೈ ಮಕ್ಕರ್’ ಪ್ರಚಾರ ಕಾರ್ಯಕ್ಕಾಗಿ ನಾಯಕಿ ಶ್ರದ್ಧಾ ಕಪೂರ್ ಜೊತೆ ವೇದಿಕೆ ಹಂಚಿಕೊಂಡಿದ್ದ ರಣಬೀರ್ ಕಪೂರ್, ತಮ್ಮ ಈ ಹಿಂದಿನ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ಫವಾದ್ ಖಾನ್ ಜೊತೆ ನಾನು ‘ಹೇ ದಿಲ್ ಹೈ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದೆ. ಪಾಕಿಸ್ತಾನದ ಹಲವಾರು ಕಲಾವಿದರು ನನಗೆ ಪರಿಚಿತರಿದ್ದಾರೆ. ಹಾಗೆಯೇ ಬಾಲಿವುಡ್ ಚಿತ್ರರಂಗಕ್ಕೆ ರಹತ್ ಫತೆ ಅಲಿಖಾನ್ ಹಾಗೂ ಆತೀಫ್ ಅಸ್ಲಾಂ ಅವರ ಕೊಡುಗೆಯೂ ಸಾಕಷ್ಟಿದೆ ಎಂದಿದ್ದಾರೆ.
ಕಲೆಗೆ ಯಾವುದೇ ಗಡಿಗಳಿಲ್ಲ. ಆದರೆ ಕಲೆಗಿಂತ ದೇಶ ಮುಖ್ಯ. ಹೀಗಾಗಿ ನನ್ನ ಮೊದಲ ಆದ್ಯತೆ ಯಾವತ್ತಿಗೂ ದೇಶವೇ ಆಗಿರುತ್ತದೆ ಎಂದು ರಣಬೀರ್ ಕಪೂರ್ ತಿಳಿಸಿದ್ದಾರೆ. ಬ್ರಹ್ಮಾಸ್ತ್ರದ ಬಳಿಕ ಇದೀಗ ಶ್ರದ್ಧಾ ಕಪೂರ್ ಜೊತೆಗಿನ ‘ ತೂ ಜೂಟಿ ಮೈ ಮಕ್ಕರ್’ ಚಿತ್ರ ಬಿಡುಗಡೆಯಾಗುತ್ತಿದ್ದು, ಇದರ ನಿರ್ದೇಶನವನ್ನು ಲವ್ ರಂಜನ್ ಮಾಡಿದ್ದಾರೆ. ‘ಬ್ರಹ್ಮಾಸ್ತ್ರ’ ಕ್ಕೆ ಅಷ್ಟೇನು ಯಶಸ್ಸು ಸಿಗದ ಹಿನ್ನೆಲೆಯಲ್ಲಿ ರಣಬೀರ್ ಕಪೂರ್ ಅವರಿಗೆ ಈ ಚಿತ್ರದ ಗೆಲುವು ಅನಿವಾರ್ಯವಾಗಿದೆ.