ಬೆಂಗಳೂರು: ಮಾಜಿ ಸಂಸದೆ ರಮ್ಯಾ ಅವರಿಗೆ ಗಮನವನ್ನು ತಮ್ಮತ್ತ ಸೆಳೆಯುವ ಸಮಸ್ಯೆ ಇದೆ. ವೈದ್ಯರಿಗೆ ತೋರಿಸಬೇಕಿದೆ ಎಂದು ಟೀಕಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಗೆ ಮಾಜಿ ಸಂಸದೆ ರಮ್ಯಾ ತಿರುಗೇಟು ನೀಡಿದ್ದಾರೆ.
ಬೇಲ್ ಮೇಲೆ ಹೊರಗಿರುವಾತ ನನ್ನ ನೈತಿಕತೆ ಪ್ರಶ್ನಿಸುತ್ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ. ನಲಪಾಡ್ ಈ ಹಿಂದೆ ನಡೆಸಿದ ಅಪಘಾತ ಮತ್ತು ಕೆಫೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಪ್ರಸ್ತಾಪಿಸಿ ಕಿಡಿಕಾರಿರುವ ರಮ್ಯಾ ಟ್ವೀಟ್ ನಲ್ಲಿ ಪತ್ರಿಕಾ ಸುದ್ದಿಗಳ ತುಣುಕುಗಳನ್ನು ಹಂಚಿಕೊಂಡು ಟಾಂಗ್ ಕೊಟ್ಟಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಶಾಸಕ ಎನ್.ಎ. ಹ್ಯಾರಿಸ್ ಪುತ್ರನಾದ ಈ ಹುಡುಗ ನನ್ನ ನೈತಿಕತೆಯ ಪ್ರಶ್ನೆ ಮಾಡಿದ್ದಾರೆ. ವಾವ್ ಎಂದು ವ್ಯಂಗ್ಯವಾಡಿದ್ದಾರೆ.
ರಮ್ಯಾ ಪರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು, ವಾದ-ವಿವಾದ ಸ್ಥಗಿತಗೊಳಿಸುವಂತೆ ಟ್ವೀಟ್ ಮಾಡಿದ್ದಾರೆ. ರಮ್ಯಾ ಕಾಂಗ್ರೆಸ್ ಪಕ್ಷದ ಮಾಜಿ ಸಂಸದರಾಗಿದ್ದು ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷದ ಹಿತಾಸಕ್ತಿಗಾಗಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಮ್ಮ ಪಕ್ಷದ ಕೆಲವರು ಇತಿಮಿತಿಗಳನ್ನು ಮೀರಿ ಮಾತನಾಡುವ ಮೂಲಕ ಅವರ ತೇಜೋವಧೆಗೆ ಯತ್ನಿಸಿದ್ದಾರೆ ಎಂದು ಖಂಡಿಸಿದ್ದಾರೆ.
ಎಂಬಿ.ಪಾಟೀಲ್ ಮತ್ತು ಸಚಿವ ಅಶ್ವತ್ಥನಾರಾಯಣ ಭೇಟಿಯಾಗಿದ್ದರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದ ಸಂದರ್ಭದಲ್ಲಿ ರಮ್ಯಾ ಕಾಂಗ್ರೆಸ್ ಕಾಂಗ್ರೆಸಿಗ ಎಂದು ಎಂ.ಬಿ. ಪಾಟೀಲ್ ಅವರನ್ನು ಸಮರ್ಥಿಸಿಕೊಂಡಿದ್ದರು. ತಮ್ಮನ್ನು ಟ್ರೋಲ್ ಮಾಡುವ ವಿಚಾರಕ್ಕೆ ಡಿ.ಕೆ. ಶಿವಕುಮಾರ್ ನಡೆ ಟೀಕಿಸಿದ್ದರು.
https://twitter.com/divyaspandana/status/1524770990177210369