ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಬಳಿಕ ಕಳೆದ ಎರಡು ದಿನಗಳಿಂದ ಹೋಟೆಲ್ ಬಂದ್ ಆಗಿದ್ದು, ಶೀಘ್ರದಲ್ಲಿಯೇ ಪುನರಾರಂಭವಾಗಲಿದೆ ಎಂದು ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ 8-10 ಪೊಲೀಸರ ತಂಡ ರಚನೆಯಾಗಿದ್ದು, ಬಾಂಬ್ ಸ್ಫೋಟಿಸಿದ ಆರೋಪಿ ಪತ್ತೆಯಾಗಿ ಶೋಧಕಾರ್ಯ ತೀವ್ರಗೊಂಡಿದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್, ಶಿವರಾತ್ರಿಯಂದು ಹೋಟೆಲ್ ಪುನರಾರಂಭವಾಗಲಿದೆ. ಇದೊಂದು ಪುನರ್ಜನ್ಮ. ರಾಮೇಶ್ವರಂ ಕೆಫೆ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. 2012ರಲ್ಲಿ ಕುಮಾರಪಾರ್ಕ್ ಸಮೀಪ ಆರಂಭಮಾಡಿದ್ದೆವು. ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಒಂದರ ಹಿಂದೊಂದರಂತೆ ಕಷ್ಟಗಳು ಬರುತ್ತಿವೆ ಎಲ್ಲವನ್ನೂ ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಎಪಿಜೆ ಅಬ್ದುಲ್ ಕಲಾಂ ಅವರನ್ನು ನಂಬಿದ್ದೇವೆ. ಅವರ ಜನ್ಮಸ್ಥಳ ರಾಮೇಶ್ವರಂ. ಹಾಗಾಗಿ ರಾಮೇಶ್ವರಂ ಕೆಫೆ ಎಂದು ಹೋಟೆಲ್ ಗೆ ಹೆಸರಿಡಲಾಗಿದೆ. ರಾಮೇಶ್ವರಂ ಪ್ರಾರಂಭಕ್ಕೂ ಮುನ್ನ ಹಲವು ಹೋಟೆಲ್ ಗಳಲ್ಲಿ ಕೆಲಸ ಮಾಡಿದ್ದೇವೆ. ಬಾಂಬ್ ಸ್ಫೋಟ ಪ್ರಕರಣವನ್ನು ಸಹಿಸಲು ಸಾಧ್ಯವಿಲ್ಲ. ಭರತೀಯರೆಲ್ಲರೂ ಈ ಕೃತ್ಯ ಖಂಡಿಸಬೇಕು ಎಂದಿದ್ದಾರೆ.