ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ರಾಮೇಶ್ವರಂ ಕೆಫೆ ಸ್ಫೊಟದ ದಿನವೇ ಬಿಜೆಪಿ ಕಚೇರಿ ಸ್ಫೊಟಕ್ಕೂ ದುಷ್ಕರ್ಮಿ ಸಂಚು ರೂಪಿಸಿದ್ದ ಎಂಬ ಅಂಶ ಬಯಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಎನ್ಐಎ ಅಧಿಕಾರಿಗಳು ನಾಲ್ವರ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿ ಕೆಲ ಬೆಚ್ಚಿ ಬೀಳಿಸುವಂತಹ ಅಂಶಗಳನ್ನು ಉಲ್ಲೇಖಿಸಿದ್ದಾರೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬ್ದುಲ್ ಮತಿನ್ ತಾಹಾ, ಮುಸಾವಿರ್ ಹುಸೇನ್, ಮಾಜ್ ಮುನೀರ್ ಅಹ್ಮದ್ ಹಾಗೂ ಮುಝಮ್ಮಿಲ್ ವಿರುದ್ಧ ಎನ್ಐಎ ಅಧಿಕಾರಿಗಳು ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ. ದುಷ್ಕರ್ಮಿಗಳು ಬಿಜೆಪಿ ಕಚೇರಿ ಬ್ಲಾಸ್ಟ್ ಗೂ ಪ್ಲಾನ್ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಮುನ್ನ ದುಷ್ಕರ್ಮಿ ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಯತ್ನಿಸಿದ್ದ. ಆದರೆ ಆತನ ಯತ್ನ ವಿಫಲವಾಗಿತ್ತು. ತನ್ನ ಯತ್ನ ವಿಫಲವಾದ ಕಾರಣಕ್ಕೆ ಆತ ರಾಮೇಶ್ವರಂ ಕೆಫೆಗೆ ಹೋಗಿ ಅಲ್ಲಿ ಊಟ ಮಾಡಿದ ಬಳಿಕ ಕೆಫೆಯನ್ನು ಸ್ಫೋಟಿಸಿದ್ದ ಎಂಬ ಮಹತ್ವದ ಮಾಹಿತಿಗಳನ್ನು ಎನ್ ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.