ಬೆಳಗಾವಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ತಿಯೋ ಇಲ್ಲ ಸಿಡಿ ಬಿಡುಗಡೆ ಮಾಡ್ಲ ಎಂದು ಒಬ್ಬ ಮಂತ್ರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆದರಿಸಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಗೋಕಾಕ್ ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಡಿ ಪಾರ್ಟನರ್ ಮತ್ತು ಆಕ್ಟರ್ ಬೆಳಗಾವಿಯಲ್ಲಿ ಇದ್ದಾರೆ. ಅವರ ಜೊತೆಗೆ ಮತ್ತೊಬ್ಬ ಡ್ರೈವರ್ ಕೂಡ ಸೇರಿಕೊಂಡಿದ್ದಾನೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ನಮ್ಮ ಪಕ್ಷಕ್ಕೆ ಬರ್ತೀಯೋ ಇಲ್ಲ ಸಿಡಿ ಬಿಡಲೋ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಂತ್ರಿಯೊಬ್ಬರನ್ನು ಬೆದರಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದು, ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಿಡಿ ಸಮರ ಶುರುವಾಗುವ ಲಕ್ಷಣ ಗೋಚರಿಸುತ್ತಿವೆ.
ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ ರಮೇಶ್ ಜಾರಕಿಹೊಳಿ ನಾವು ಯುದ್ಧ ಮಾಡುವವರು. ಷಡ್ಯಂತ್ರ ಮಾಡುವವರಲ್ಲ. ಅವನ ಪತ್ನಿಯೂ ನನ್ನ ತಂಗಿ ಇದ್ದ ಹಾಗೆ. ಮನೆ ಒಡೆಯಬಾರದು. ನನ್ನ ಬಳಿ ಸಾಕ್ಷ್ಯಾಧಾರಗಳಿದ್ದರೂ ಬಿಡಲ್ಲ. ನನಗೊಬ್ಬನಿಗೆ ತೊಂದರೆಯಾಗಿದೆ. ನಾನು ಹೊರಗೆ ಬಂದಿದ್ದೇನೆ. ಬೇರೆಯವರಿಗೆ ಈ ರೀತಿ ಆಗಬಾರದು. ಇಂತಹ ವ್ಯಕ್ತಿಗೆ ಅಪ್ಪಿ ತಪ್ಪಿ ಅಧಿಕಾರ ಸಿಕ್ಕರೆ ಏನಾಗಬಹುದು? ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಬಾರದು ಎಂದರು.
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರಂತಹ ಒಳ್ಳೆಯವರು ಇದ್ದಾರೆ. ಆದರೆ, ಅವರದು ಏನೂ ನಡೆಯುವುದಿಲ್ಲ. ಬ್ಲಾಕ್ ಮೇಲರ್ ಕೈಯಲ್ಲಿ ಕಾಂಗ್ರೆಸ್ ಪಕ್ಷ ಸಿಕ್ಕು ಅದರ ಕಥೆ ಮುಗಿದಿದೆ. ಯಾವುದೇ ಆಡಿಯೋ, ವಿಡಿಯೋ ಬಿಡುಗಡೆಯಾಗಬಹುದು, ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶಪಥ ಮಾಡಿದ್ದೇನೆ. ಏನಾದರೂ ಆಗಲಿ ಎಷ್ಟೇ ತೊಂದರೆಯಾಗಲಿ, ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.