
ಬೆಳಗಾವಿ: ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಆಪರೇಷನ್ ಹಸ್ತದ ವಿಚಾರವಾಗಿ ಕಿಡಿಕಾರಿದ್ದಾರೆ.
ಬೆಳಗಾವಿಯ ಅಥಣಿ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನ 25-30 ಶಾಸಕರು ಮುಂದಿನ ನಿರ್ಣಯಕ್ಕೆ ಸೇರುವವರಿದ್ದರು. ಅದನ್ನು ಮರೆಮಾಚಲು ಮಹಾನಾಯಕ ಮಾಡಿದ ಕುತಂತ್ರವಾಗಿದೆ. ಇದು ಆಪರೇಷನ್ ಹಸ್ತ ಅಲ್ಲ. ಅವರ ಪಕ್ಷದ 25-30 ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ಸೇರುವವರಿದ್ದರು. ತನ್ನ ಪಕ್ಷಕ್ಕೆ ಅವಮಾನವಾಗುತ್ತೆ ಅಂತಾ ಆಪರೇಷನ್ ಹಸ್ತ ಎಂದು ಆ ನಾಯಕ ಪೋಸ್ ಕೊಡುತ್ತಿದ್ದಾರೆ. ನನಗೆ ಎಲ್ಲವೂ ಗೊತ್ತು ಎಂದು ಹೇಳಿದ್ದಾರೆ.
ಸಿಎಂ ಗೆ ಪತ್ರ ಬರೆದ ಬಳಿಕ ಶಾಸಕರೆಲ್ಲರೂ ಸೇರುವವರಿದ್ದರು. ಇದಕ್ಕೆ ಹೆದರಿ ಆಪರೇಷನ್ ಹಸ್ತ ಎಂದು ಮಹಾನಾಯಕ ನಾಟಕವಾಡುತ್ತಿದ್ದಾರೆ. ಆಪರೇಷನ್ ಹಸ್ತ ಮಾಡೋರು ಮೂರ್ಖರು, ಹೋಗೋರು ಮೂರ್ಖರು ಎಂದು ವಾಗ್ದಾಳಿ ನಡೆಸಿದ್ದಾರೆ.